ಬೌಧ್(ಒಡಿಶಾ): ಒಡಿಶಾದ ಬೌಧ್ ಜಿಲ್ಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಬಂಡೆಗಳ ನಡುವೆ ಸಿಲುಕಿದ್ದ ಐದು ವರ್ಷದ ಬಾಲಕನನ್ನು ಬುಧವಾರ ರಕ್ಷಿಸಿದ್ದಾರೆ.
ಘಟನಾ ಸ್ಥಳಕ್ಕೆ ತಲುಪಿದ ಅಗ್ನಿಶಾಮಕ ಸಿಬ್ಬಂದಿ ಆರಂಭದಲ್ಲಿ ಭಾರೀ ಪ್ರಮಾಣದ ನೀರಿನ ಹರಿವಿನಿಂದಾಗಿ ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ಹರಭಂಗದ ಹೆಚ್ಚುವರಿ ತಹಶೀಲ್ದಾರ್ ಹರಿಓಂ ಭೋಯ್ ಹೇಳಿದ್ದಾರೆ.
"ಬಾಲಕನ ಕಾಲುಗಳೆರೆಡು ಎರಡು ಬಂಡೆಗಳ ನಡುವೆ ಸಿಲುಕಿಕೊಂಡಿದ್ದವು. ಅಗ್ನಿಶಾಮಕ ಸೇವೆಗಳ ತಂಡ ಮತ್ತು ವೈದ್ಯಕೀಯ ತಂಡವು ಸ್ಥಳಕ್ಕೆ ತಲುಪಿ ಸತತ ಮೂರು ಗಂಟೆಗಳ ಶ್ರಮದ ನಂತರ ಅವನನ್ನು ನೀರಿನಿಂದ ಹೊರ ತೆಗೆದು ರಕ್ಷಿಸುವಲ್ಲಿ ಯಶಸ್ವಿಯಾಗಿದೆ" ಎಂದು ಭೋಯ್ ತಿಳಿಸಿದರು.
ಮಗುವನ್ನು ರಕ್ಷಿಸಿದ ನಂತರ ಪ್ರಥಮ ಚಿಕಿತ್ಸೆ ಮತ್ತು ತಪಾಸಣೆಗಾಗಿ ಪುರುನಕಟಕ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.