ಭುವನೇಶ್ವರ್: ತನ್ನ ರಾಜ್ಯದ ಕಾರ್ಮಿಕರನ್ನು ಮರಳಿ ಕರೆಸಿಕೊಳ್ಳಲು ನೆರವಾಗುವಂತೆ ಕರ್ನಾಟಕ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿಗಳಿಗೆ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಮನವಿ ಮಾಡಿಕೊಂಡಿದ್ದಾರೆ. ಲಾಕ್ಡೌನ್ನಿಂದಾಗಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶಗಳಲ್ಲಿ ಸಿಲುಕಿರುವ ಒಡಿಶಾ ನಾಗರಿಕರನ್ನು ಸುರಕ್ಷಿತವಾಗಿ ತವರಿಗೆ ಕಳುಹಿಸುವಲ್ಲಿ ಸಹಕಾರ ನೀಡಬೇಕೆಂದು ಅವರು ಕೋರಿದ್ದಾರೆ.
ಕರ್ನಾಟಕ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಆಂಧ್ರ ಪ್ರದೇಶ ಸಿಎಂ ವೈಎಸ್ ಜಗನ್ನಾಥ ರೆಡ್ಡಿ ಅವರೊಂದಿಗೆ ಪಟ್ನಾಯಕ್ ಪ್ರತ್ಯೇಕವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕುರಿತು ಚರ್ಚೆ ನಡೆಸಿದರು. ಕೇಂದ್ರ ಪೆಟ್ರೋಲಿಯಂ ಹಾಗೂ ಉಕ್ಕು ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರೂ ಕಾನ್ಫರೆನ್ಸಿಂಗ್ನಲ್ಲಿ ಭಾಗವಹಿಸಿದ್ದರು. ದಕ್ಷಿಣದ ರಾಜ್ಯಗಳಲ್ಲಿ ಸಿಲುಕಿರುವ ಒಡಿಶಾ ನಾಗರಿಕರನ್ನು ಸುರಕ್ಷಿತವಾಗಿ ಕಳುಹಿಸಲು ರಾಜ್ಯಗಳೊಂದಿಗೆ ತಾವು ಸಮನ್ವಯತೆ ಸಾಧಿಸುವುದಾಗಿ ಪ್ರಧಾನ್ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಈಗಾಗಲೇ ಕರ್ನಾಟಕ ಹಾಗೂ ಆಂಧ್ರ ಪ್ರದೇಶಗಳ ಹಲವಾರು ವಲಯಗಳಲ್ಲಿ ಕಾರ್ಯಚಟುವಟಿಕೆಗಳು ಪುನಾರಂಭಗೊಂಡಿರುವುದಾಗಿ ತಿಳಿಸಿದ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು, ಒಂದು ವೇಳೆ ಒಡಿಶಾ ನಾಗರಿಕರು ಕೆಲಸ ಮುಂದುವರಿಸಲು ಬಯಸಿದರೆ ಅಂಥವರು ಇಲ್ಲಿಯೇ ಉಳಿಯಬಹುದು ಹಾಗೂ ತವರಿಗೆ ಮರಳಬಯಸುವ ಎಲ್ಲರಿಗೂ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಬೇರೆ ರಾಜ್ಯಗಳಲ್ಲಿರುವ ಒಡಿಶಾ ನಾಗರಿಕರ ಅನುಕೂಲಕ್ಕಾಗಿ ಒಡಿಶಾ ಸರ್ಕಾರ ಆನ್ಲೈನ್ ಪೋರ್ಟಲ್ ಆರಂಭಿಸಿದೆ. ಆಧಾರ್ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸುವ ಮೂಲಕ ತವರು ರಾಜ್ಯಕ್ಕೆ ಮರಳಬಯಸುವ ನಾಗರಿಕರು ಇದರಲ್ಲಿ ತಮ್ಮ ಹೆಸರು ನೋಂದಾಯಿಸಬಹುದಾಗಿದೆ. ಒಡಿಶಾಗೆ ತಲುಪಿದ ತಕ್ಷಣ ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಗುವುದು ಹಾಗೂ ಅವರೆಲ್ಲರೂ ಕ್ವಾರಂಟೈನ್ನಲ್ಲಿರುವುದು ಕಡ್ಡಾಯವಾಗಿದೆ.