ನವದೆಹಲಿ: ಗ್ರಾಮೀಣ ಬಡವರಿಗೆ ಕೇಂದ್ರದ ಪ್ರಮುಖ ವಸತಿ ಯೋಜನೆ ಪಾರದರ್ಶಕತೆಗೆ ಒತ್ತು ನೀಡುತ್ತದೆ ಮತ್ತು ಸರ್ಕಾರವು ಈಗ ಬೇರೆ ದಾರಿಯ ಮೂಲಕ ಬಡವರನ್ನು ತಲುಪುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮಧ್ಯಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ನಿರ್ಮಿಸಲಾದ 1.75 ಲಕ್ಷ ಮನೆಗಳನ್ನು ಉದ್ಘಾಟಿಸಿ 'ಗೃಹ ಪ್ರವೇಶ' ಕಾರ್ಯಕ್ರಮದಲ್ಲಿ ಮಾನಾಡಿದ ಮೋದಿ, "2014ರ ಹಿಂದಿನ ಅನುಭವಗಳನ್ನು ಅಧ್ಯಯನ ಮಾಡಿ ಹಳೆಯ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಲಾಯಿತು. ಪಿಎಂ ಆವಾಸ್ ಯೋಜನೆಯನ್ನು ಸಂಪೂರ್ಣವಾಗಿ ಹೊಸ ಆಲೋಚನೆಯೊಂದಿಗೆ ಜಾರಿಗೆ ತರಲಾಯಿತು. ಈ 'ಗೃಹ ಪ್ರವೇಶ' ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಈ ಹಿಂದೆ ಬಡವರು ಸರ್ಕಾರದ ಹಿಂದೆ ಅಲೆದಾಡುತ್ತಿದ್ದರು. ಈಗ ನಮ್ಮ ಸರ್ಕಾರ ಜನರನ್ನು ತಲುಪುತ್ತಿದೆ. ಯಾರ ಆಶಯದ ಮೇರೆಗೆ ಯಾರ ಹೆಸರನ್ನು ಸೇರಿಸಲು ಅಥವಾ ಅಳಿಸಲು ಸಾಧ್ಯವಿಲ್ಲ. ಆಯ್ಕೆಯಿಂದ ನಿರ್ಮಾಣದವರೆಗೆ ವೈಜ್ಞಾನಿಕ ಮತ್ತು ಪಾರದರ್ಶಕ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ" ಎಂದು ಹೇಳಿದರು.
ಸ್ಥಳೀಯ ಅವಶ್ಯಕತೆಗಳನ್ನು ಪರಿಗಣಿಸಿ ಈಗ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ಪ್ರದೇಶದಲ್ಲಿ ಸುಲಭವಾಗಿ ಲಭ್ಯವಿರುವ ವಸ್ತುಗಳ ಬಳಕೆಯನ್ನು ಸಹ ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.