ನವದೆಹಲಿ: ಕೊರೊನಾ ಮಹಾಮಾರಿಯಿಂದಾಗಿ ದೇಶದ ಆರ್ಥಿಕತೆ ಸಂಪೂರ್ಣವಾಗಿ ಕುಸಿತ ಕಂಡಿದ್ದು, ಕೆಲಸ ಮಾಡುವ ಸಿಬ್ಬಂದಿಗೆ ಖಾಸಗಿ ಇಲಾಖೆಗಳ ಜತೆಗೆ ಸರ್ಕಾರ ಕೂಡ ಸರಿಯಾದ ಸಮಯಕ್ಕೆ ಸಂಬಳ ನೀಡದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ ಅನೇಕ ಕುಟುಂಬಗಳು ತೊಂದರೆ ಅನುಭವಿಸುವಂತಾಗಿದೆ.
ಕಳೆದ ಮೂರು ತಿಂಗಳಿಂದ ಯಾವುದೇ ಸಂಬಳ ಸಿಗದ ಕಾರಣಕ್ಕಾಗಿ ಗುಮಾಸ್ತನೋರ್ವ ತನ್ನ ಇಬ್ಬರು ಚಿಕ್ಕ ಮಕ್ಕಳನ್ನ ಸರ್ಕಾರಿ ಕಚೇರಿ ಮುಂದೆ ಬಿಟ್ಟು ಬಂದಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಜ್ಯೋತಿಬಾ ಫುಲೆ ಹೌಸಿಂಗ್ ಸೊಸೈಟಿಯ ಗುಮಾಸ್ತನಾಗಿರುವ ನರೇಶ್ ತನ್ನ ಮಕ್ಕಳ ನಿರ್ವಹಣೆಯನ್ನ ಸರ್ಕಾರ ನೋಡಿಕೊಳ್ಳಲಿ ಎಂದು ಹೇಳಿ ಈ ರೀತಿಯಾಗಿ ನಡೆದುಕೊಂಡಿದ್ದಾನೆ.
ಕಳೆದ ಮೂರು ತಿಂಗಳಿಂದ ನನಗೆ ಯಾವುದೇ ರೀತಿಯ ಸಂಬಳ ಬಂದಿಲ್ಲ. ಹೌಸಿಂಗ್ ಸೊಸೈಟಿಯವನ್ನ ಕೇಳಿದರೆ ಸ್ಯಾಲರಿ ನೀಡಲು ಹಿಂದೇಟು ಹಾಕ್ತಿದ್ದಾರೆ. ಮನೆ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಹೀಗಾಗಿ ಚಿಕ್ಕ ಮಕ್ಕಳನ್ನು ಕಚೇರಿ ಮುಂದೆ ಬಿಟ್ಟಿದ್ದೇನೆ. ತನಗೆ ಸಂಬಳ ನೀಡುವವರೆಗೆ ಮಕ್ಕಳನ್ನ ಇವರೇ ನೀಡಿಕೊಳ್ಳಲಿ ಎಂದಿದ್ದಾನೆ.
ಇದಕ್ಕೆ ಸಂಬಂಧಿಸಿದಂತೆ ಸೆಕ್ಯುರಿಟಿ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಅಲ್ಲಿಗೆ ತೆರಳಿ ಎರಡು ಮಕ್ಕಳನ್ನ ಪುನಃ ನರೇಶ್ ಅವರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.