ವಾರಣಾಸಿ(ಉತ್ತರ ಪ್ರದೇಶ): ಗಂಗಾ ನದಿಯ ಸ್ನಾನದಿಂದಾಗಿ ನಮ್ಮ ಪಾಪಗಳೆಲ್ಲವೂ ಕಳೆದು ಹೋಗಲಿದೆ ಎಂಬ ನಂಬಿಕೆ ಇದೆ. ಗಂಗೆ ಕೇವಲ ನಮ್ಮ ಪಾಪವನ್ನು ಮಾತ್ರವಲ್ಲದೇ, ಹೆಮ್ಮಾರಿ ಕೊರೊನಾ ರೋಗವನ್ನು ಸಹ ತೊಲಗಿಸಬಲ್ಲದು ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮಾಜಿ ಪ್ರಾಧ್ಯಾಪಕ ಪ್ರೊ.ಯು.ಕೆ.ಚೌಧರಿ ಹೇಳಿದ್ದಾರೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಗಂಗಾ ಸಂಶೋಧನಾ ಕೇಂದ್ರದ ಸಂಸ್ಥಾಪಕರೂ ಆಗಿರುವ ಚೌಧರಿ, ಗಂಗಾ ನೀರಿನಲ್ಲಿ ಬ್ಯಾಕ್ಟೀರಿಯೊ ಫೇಜ್‌ಗಳ ಪ್ರಮಾಣ ಗಣನೀಯವಾಗಿ ಹೆಚ್ಚಿರುತ್ತದೆ. ಇದು ಬ್ಯಾಕ್ಟೀರಿಯಾವನ್ನು ಕೊಲ್ಲುವ ಒಂದು ರೀತಿಯ ವೈರಸ್ ಆಗಿದ್ದು, ನಮ್ಮ ಪ್ರಾಚೀನ ಗ್ರಂಥಗಳಾದ ವೇದಗಳು, ಪುರಾಣಗಳು ಮತ್ತು ಉಪನಿಷತ್ತುಗಳಲ್ಲೂ ಸಹ ಗಂಗಾ ನದಿಯಲ್ಲಿ ಔಷಧೀಯ ಗುಣ ಇದೆ ಎಂದು ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.
ಅದಲ್ಲದೇ ಗಂಗಾ ನದಿಯಲ್ಲಿ ರೋಗಕಾರಕಗಳನ್ನು ಕೊಲ್ಲುವ ಸಾಮರ್ಥ್ಯ ಇರುವ ಬ್ಯಾಕ್ಟೀರಿಯೊಫೇಜ್‌ಗಳು ಗಣನೀಯವಾಗಿದೆ ಎಂದು ವಿಜ್ಞಾನಿಗಳು ಸಹ ಸಂಶೋಧನೆಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಚೌಧರಿ ತಿಳಿಸಿದ್ದಾರೆ.
ಗಂಗಾ ನದಿಯಲ್ಲಿ ಬ್ಯಾಕ್ಟಿರಿಯೋ ಫಾಜಸ್ ಹೆಚ್ಚಾಗಿರಲು ಕಾರಣ ವಿವರಿಸಿದ ಯು.ಕೆ ಚೌಧರಿ, ಬೇರೆ ನದಿಗಳಿಗೆ ಹೋಲಿಸಿದರೆ ಗಂಗಾ ನದಿಯ ಉಗಮ ಸ್ಥಾನವಾದ ಗೋಮುಖ್ ಅತೀ ಕಡಿಮೆ ಆಳದಲ್ಲಿರುವ ಜಲಚರದ ಮೂಲಗಳಿಂದ ಹರಿದುಬರುತ್ತಿದೆ. ಈ ಕಾರಣದಿಂದಾಗಿಯೇ ಗಂಗೆಯಲ್ಲಿ ಹೆಚ್ಚು ಬ್ಯಾಕ್ಟಿರಿಯೋ ಫಾಜಸ್ ಶಕ್ತಿ ಹೊಂದಲು ಕಾರಣ ಎಂದು ತಿಳಿಸಿದ್ದಾರೆ.