ನವದೆಹಲಿ: ಕೊರೊನಾ ಮಹಾಮಾರಿ ವಿಶ್ವಾದ್ಯಂತ ವ್ಯಾಪಿಸಿರುವ ಈ ವೇಳೆ ಇಂಧನ ಬೆಲೆಯ ಮೇಲೆ ಅಬಕಾರಿ ಸುಂಕವನ್ನು ಏರಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯೊಂದರಲ್ಲಿ ಕಾಂಗ್ರೆಸ್ ಹಿರಿಯ ವಕ್ತಾರ ಅಭಿಷೇಕ್ ಮನು ಸಿಂಘ್ವಿ '' ಇದು ಲಾಭ ಗಳಿಸುವ ಸಮಯವಲ್ಲ, ಒದು ಆದಾಯನ್ನು ಹಂಚುವ ಸಮಯ. ನಮಗೆಲ್ಲಾ ಗೊತ್ತಿರುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲಿಯಂ ಬೆಲೆ ಇಳಿಕೆಯಾಗಿದೆ. ಭಾರತ ಸರ್ಕಾರಕ್ಕೆ ಲಾಭವಾಗಿದ್ದು, ಇಂಧನ ಬೆಲೆಯನ್ನು ಇಳಿಸುವ ಮೂಲಕ ಆದಾಯವನ್ನು ಹಂಚುವ ಕಾರ್ಯವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಅಂಕಿ - ಅಂಶಗಳ ಸಹಿತ ವಿವರಣೆ ನೀಡಿದ ಅವರು ಮಾರ್ಚ್ 2014ರಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 108 ಡಾಲರ್ ಇತ್ತು. ಈಗ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 23 ಡಾಲರ್ಗಳಷ್ಟು ಕಡಿಮೆಯಾಗಿದೆ. ಇದು 18-19 ವರ್ಷಗಳಲ್ಲೇ ದಾಖಲೆಯ ಇಳಿಕೆಯಾಗಿದೆ. ಇದರಿಂದ 20 ಲಕ್ಷ ಕೋಟಿ ತೈಲಕ್ಕೆ ವ್ಯಯಿಸೋದು ಉಳಿಯುತ್ತದೆ ಎಂದಿದ್ದಾರೆ.
ಆದರೂ ಕೂಡಾ ಕೇಂದ್ರ ಸರ್ಕಾರ ಒಂದು ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ 3 ರೂಪಾಯಿ ಅಬಕಾರಿ ಸುಂಕವನ್ನು ಏರಿಸಿದೆ ಎಂದು ಕಾಂಗ್ರೆಸ್ ಹಿರಿಯ ವಕ್ತಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಿರುವ ಬೆಲೆಯಲ್ಲಿ ಕೇವಲ 28 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ನೀಡಬಹುದು. ಆದರೆ, ಕೇಂದ್ರ ಸರ್ಕಾರ 74 ರೂಪಾಯಿಗೆ ಪೆಟ್ರೋಲ್ ಬೆಲೆಯನ್ನು ನಿಗದಿಪಡಿಸಿದೆ. ಕೇವಲ 32 ರೂಪಾಯಿಗೆ ಒಂದು ಡೀಸೆಲ್ ನೀಡಬಹುದಾಗಿದ್ದು, 65 ರೂಪಾಯಿ ನಿಗದಿಪಡಿಸಲಾಗಿದೆ.
ಈಗ ಕೊರೊನಾ ಮಹಾಮಾರಿಯ ಕಾರಣಕ್ಕೆ ಸಾರ್ವಜನಿಕರಿಗೆ ಸಂಕಷ್ಟ ಎದುರಾಗಿದ್ದು, ತೈಲಬೆಲೆಯ ಜೊತೆಗೆ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನೂ ಇಳಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ಜನರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.