ನವದೆಹಲಿ: ಕೊರೊನಾ ವೈರಸ್ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸೋಂಕು. ಮಾಂಸಹಾರಿ ಆಹಾರ ಅಥವಾ ಮೊಟ್ಟೆಗಳ ಸೇವನೆಯು ಸೋಂಕಿಗೆ ಕಾರಣವಾಗುವುದಿಲ್ಲ ಎಂದು ದೆಹಲಿಯ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.
'ಸಾಮಾನ್ಯ ಆರೋಗ್ಯ ಮುನ್ನೆಚ್ಚರಿಕೆಯಂತೆ, ಎಲ್ಲಾ ರೀತಿಯ ಮಾಂಸವನ್ನು ಚೆನ್ನಾಗಿ ತೊಳೆದು, ಸರಿಯಾಗಿ ಬೇಯಿಸಬೇಕು. ಮಾಂಸಹಾರಿ ಆಹಾರ ಸೇವಿಸುವುದರಿಂದ ಕೊರೊನಾ ಹರಡುವುದಿಲ್ಲ ಎಂದು ಏಮ್ಸ್ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ಅತಿಯಾದ ಬಿಸಿ ಮತ್ತು ಅತಿಯಾದ ತಂಪಿನಲ್ಲಿ ಕೊರೊನಾ ಯಾವುದೇ ಪ್ರಭಾವ ಬೀರುವುದಿಲ್ಲ ಎಂಬ ವಿಚಾರವನ್ನು ಡಾ.ರಂದೀಪ್ ಗುಲೇರಿಯಾ ತಳ್ಳಿಹಾಕಿದ್ದಾರೆ. ಹೆಚ್ಚು ಬಿಸಿ ಇರುವ ಸಿಂಗಾಪುರ ಮತ್ತು ಹೆಚ್ಚು ತಂಪಿರುವ ಯುರೋಪ್ನ ದೇಶಗಳಲ್ಲೂ ಕೊರೊನಾ ಪ್ರಭಾವ ಹೆಚ್ಚಾಗಿಯೇ ಇದೆ ಎಂದಿದ್ದಾರೆ.
ಒಂದು ಪ್ರದೇಶದ ಒಬ್ಬ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದರೆ ಅಲ್ಲಿರುವವರಿಗೆಲ್ಲಾ ಸೋಂಕು ಹರಡಿರುವುದಿಲ್ಲ. ಎಲ್ಲಿಯವರೆಗೂ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸುವುದಿಲ್ಲವೋ ಅಲ್ಲಿಯವರೆಗೂ ಸೋಂಕು ತಗುಲುವುದಿಲ್ಲ ಎಂದಿದ್ದಾರೆ.
ಲವಂಗ ಮತ್ತು ಇತರ ಗಿಡಮೂಲಿಕೆಗಳ ಸೇವನೆಯು ಕೊರೊನಾ ವೈರಸ್ ಸೋಂಕಿನ ವಿರುದ್ಧ ಪರಿಣಾಮ ಬೀರುವುದಿಲ್ಲ ಎಂದು ಏಮ್ಸ್ ನಿರ್ದೇಶಕರು ಹೇಳಿದ್ದಾರೆ. ಇತ್ತ ಮದ್ಯ ಸೇವನೆ ಕೂಡ ಕೊರೊನಾ ಹರಡುವಿಕೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ರಂದೀಪ್ ಗುಲೇರಿಯಾ ಮಾಹಿತಿ ನೀಡಿದ್ದಾರೆ.
ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಸೋಪು ಅಥವಾ ಸ್ಯಾನಿಟೈಜರ್ಗಳಿಂದ ಕೈಗಳನ್ನು ಆಗಾಗ್ಗೆ ಚೆನ್ನಾಗಿ ತೊಳೆಯಬೇಕು ಎಂದು ಸಲಹೆ ನೀಡಿದ್ದಾರೆ.