ನವದೆಹಲಿ: ಕೊರೊನಾ ವೈರಸ್ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ ಕೆಲವೇ ಗಂಟೆಗಳ ನಂತರ, 'ಇಂತಹ ಸೂಕ್ಷ್ಮ ವಿಷಯವನ್ನು ಯಾರೂ ಕೂಡ ರಾಜಕೀಯಗೊಳಿಸಬಾರದು' ಎಂದು ರಾಜ್ಯ ಆರೋಗ್ಯ ಖಾತೆ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಮಾತನ್ನ ತೀವ್ರವಾಗಿ ಟೀಕಿಸಿದ ಚೌಬೆ, 'ರಾಹುಲ್ ಗಾಂಧಿ ನೀಡಿದ ಹೇಳಿಕೆ ಅತ್ಯಂತ ದುರದೃಷ್ಟಕರ. ಇಂತಹ ವಿಷಯವನ್ನು ರಾಜಕೀಯಗೊಳಿಸುವುದನ್ನು ಅವರು ನಿಲ್ಲಿಸಬೇಕು' ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಕೊರೊನಾ ವೈರಸ್ ನಮ್ಮ ಜನರಿಗೆ ಮತ್ತು ಆರ್ಥಿಕತೆಗೆ ಎದುರಾದ ಅತ್ಯಂತ ಗಂಭೀರ ಅಪಾಯವಾಗಿದೆ. ಈ ಬೆದರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ' ಎಂದು ಹೇಳಿದ್ದರು.
ಕೇರಳದಲ್ಲಿ ಮೂರು ಶಂಕಿತ ಪ್ರಕರಣಗಳು ವರದಿಯಾಗಿವೆ. ಆದರೆ ಅಪಾಯವನ್ನು ನಿಯಂತ್ರಿಸಲು ನಾವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ. ಪ್ರಧಾನ ಮಂತ್ರಿ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಮತ್ತು ಆರೋಗ್ಯ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳು ನಿಯಮಿತವಾಗಿ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಚೌಬೆ ಹೇಳಿದ್ದಾರೆ.
ನಮ್ಮ ಸರ್ಕಾರವು ಚೀನಾಕ್ಕೂ ತನ್ನ ಸಹಾಯವನ್ನು ವಿಸ್ತರಿಸಿದೆ. ಕೊರೊನಾ ವೈರಸ್ ಅನ್ನು ಎದುರಿಸಲು ಚೀನಾಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಭಾರತದಲ್ಲಿ ಮೂರು ಪ್ರಕರಣಗಳು ವರದಿಯಾಗಿದ್ದರೂ, ಇಲ್ಲಿಯವರೆಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದಿದ್ದಾರೆ.
ವಿಮಾನ ನಿಲ್ದಾಣದಲ್ಲಿ ವಿದೇಶಗಳಿಂದ ಬರುವ ಎಲ್ಲ ಪ್ರಯಾಣಿಕರನ್ನು ತಪಾಸಣೆ ಮಾಡುವುದರ ಹೊರತಾಗಿ, ಈ ವಿಷಯದಲ್ಲಿ ಜಾಗರೂಕರಾಗಿರಿ ಎಂದು ರಾಜ್ಯ ಸರ್ಕಾರಗಳನ್ನು ಎಚ್ಚರಿಸಿದೆ.