ಕೋಲ್ಕತ್ತಾ: ದೀಪಾವಳಿ ಸಂಭ್ರಮದ ವೇಳೆ ವಿವಿಧ ರಾಜ್ಯಗಳಲ್ಲಿ ಪಟಾಕಿ ಮಾರಾಟ ಹಾಗೂ ಸಿಡಿಸುವುದನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಲಾಗುತ್ತಿದ್ದು, ಇದೀಗ ದೀದಿ ನಾಡಲ್ಲೂ ಇಂತಹದೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಈಗಾಗಲೇ ದೀಪಾವಳಿ ಸಮಯದಲ್ಲಿ ರಾಜಸ್ಥಾನ, ಒಡಿಶಾ ಹಾಗೂ ದೆಹಲಿಯಲ್ಲಿ ಪಟಾಕಿ ಸಿಡಿಸುವುದನ್ನು ಬ್ಯಾನ್ ಮಾಡಿ ಅಲ್ಲಿನ ಸರ್ಕಾರಗಳು ಆದೇಶ ಹೊರಡಿಸಿವೆ. ಇದರ ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳ ಸರ್ಕಾರ ಕೂಡ ಅಂತಹದೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ದೀಪಾವಳಿ ಹಾಗೂ ಕಾಳಿ ಪೂಜೆ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಬ್ಯಾನ್ ಮಾಡಲಾಗಿದೆ. ಪಟಾಕಿ ಹಚ್ಚುವುದರಿಂದ ಕೊರೊನಾ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ವದಂತಿ ಹಬ್ಬಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ವಾಯು ಮಾಲಿನ್ಯ ಹಾಗೂ ಕೋವಿಡ್ ರೋಗಿಗಳಿಗೆ ಅಪಾಯಕಾರಿಯಾದ ವಾಯು ಮಾಲಿನ್ಯ ಹತೋಟಿಗೆ ತರುವ ಉದ್ದೇಶದಿಂದ ಕೋಲ್ಕತ್ತಾ ಹೈಕೋರ್ಟ್ನಲ್ಲಿ ಹಲವು ಅರ್ಜಿ ಸಲ್ಲಿಯಾಗಿದ್ದವು. ಅವುಗಳನ್ನು ಪರಿಗಣನೆಗೆ ತೆಗೆದುಕೊಂಡ ನಂತರ ಕೋರ್ಟ್ ಈ ಆದೇಶ ನೀಡಿದೆ.
ಪ್ರತಿಯೊಬ್ಬರ ಸಹಕಾರದೊಂದಿಗೆ ನಾವು ಪಟಾಕಿ ಸಿಡಿಸುವುದನ್ನು ತಪ್ಪಿಸಬೇಕಾಗಿದ್ದು, ಸ್ಥಳೀಯ ಆಡಳಿತ ಇದರ ಬಗ್ಗೆ ಮನವಿ ಮಾಡಲಿದೆ ಎಂದು ತಿಳಿಸಿದೆ. ಆದರೆ ಪಟಾಕಿ ಬ್ಯಾನ್ ಮಾಡುವುದರಿಂದ ಲಕ್ಷಾಂತರ ಜನರ ಜಿವನೋಪಾಯಕ್ಕೆ ತೊಂದರೆಯಾಗಲಿದೆ ಎಂದು ಅನೇಕರು ಈಗಾಗಲೇ ಹೇಳಿದ್ದಾರೆ. ತಮಿಳುನಾಡಿನಲ್ಲಿ ಅತಿ ಹೆಚ್ಚು ಪಟಾಕಿ ಉತ್ಪಾದನೆ ಮಾಡಲಿದ್ದು, ಇವುಗಳ ಮಾರಾಟ ಬ್ಯಾನ್ ಮಾಡುವುದರಿಂದ ಲಕ್ಷಾಂತರ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಸಿಎಂ ಪಳನಿಸ್ವಾಮಿ ಈಗಾಗಲೇ ವಿವಿಧ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.