ನವದೆಹಲಿ: ಈಗಾಗಲೇ ಜಾರಿಗೊಂಡಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವುದರ ಮಧ್ಯೆಯೇ ಕೇಂದ್ರ ಸರ್ಕಾರ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಯೋಜನೆಗೆ ಸಂಪುಟದಲ್ಲಿ ಅನುಮೋದನೆ ನೀಡಿದೆ. ಇದೇ ವಿಷಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಅಮಿತ್ ಶಾ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ. ಎನ್ಆರ್ಸಿ ಬಗ್ಗೆ ಚರ್ಚೆ ಮಾಡುವಂತಹ ಅವಶ್ಯಕತೆ ಇಲ್ಲ. ಪ್ರಧಾನಿ ಮೋದಿಯವರು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ. ಈ ವಿಷಯದ ಬಗ್ಗೆ ಪಾರ್ಲಿಮೆಂಟ್ ಅಥವಾ ಕ್ಯಾಬಿನೆಟ್ನಲ್ಲಿ ಚರ್ಚೆ ನಡೆಸುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಅಸಾದುದ್ದೀನ್ ಓವೈಸಿ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ, ಸೂರ್ಯ ಪೂರ್ವದಿಂದ ಉದಯಿಸುತ್ತಾನೆ ಎಂದು ನಾವು ಹೇಳಿದ್ರೆ ಓವೈಸಿಜೀ ಇಲ್ಲ ಅದು ಪಶ್ಚಿಮದಿಂದ ಉದಯಿಸುತ್ತಾನೆ ಎಂದು ಹೇಳುತ್ತಾರೆ. ಅವರು ಯಾವಾಗಲೂ ನಮ್ಮ ನಿಲುವು ವಿರೋಧಿಸುತ್ತಾರೆ ಎಂದಿದ್ದಾರೆ.
ಎನ್ಆರ್ಸಿ ಹಾಗೂ ಸಿಎಎ ಜಾರಿ ಮಾಡಲು ಈಗಾಗಲೇ ಕೇರಳ ಹಾಗೂ ಪಶ್ಚಿಮ ಬಂಗಾಳ ಹಿಂದೇಟು ಹಾಕುತ್ತಿದ್ದು, ಅಲ್ಲಿನ ಮುಖ್ಯಮಂತ್ರಿಗಳು ತಮ್ಮ ನಿರ್ಧಾರದ ಬಗ್ಗೆ ಇನ್ನೊಂದು ಸಲ ಪರಾಮರ್ಶೆ ಮಾಡುವ ಅಗತ್ಯವಿದೆ. ನಾನು ಅವರ ಬಳಿ ಈ ರೀತಿಯಾಗಿ ನಿರ್ಧಾರ ಕೈಗೊಳ್ಳಬೇಡಿ ಎಂದು ಮನವಿ ಮಾಡಿಕೊಳ್ಳುವೆ ಎಂದು ತಿಳಿಸಿದ್ದಾರೆ. ನಿಮ್ಮ ರಾಜಕೀಯ ಲೆಕ್ಕಾಚಾರಕ್ಕಾಗಿ ಬಡವರನ್ನ ಅಭಿವೃದ್ದಿ ಯೋಜನೆಯಿಂದ ಹೊರಗೆ ಇಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.