ಅಯೋಧ್ಯೆ: ಆಗಸ್ಟ್ 5ರಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ದೇಗುಲ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ 300ಕ್ಕೂ ಹೆಚ್ಚು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿತ್ತು. ಆದರೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಅವರು ಕಾರ್ಯಕ್ರಮದಲ್ಲಿ ನೇರವಾಗಿ ಭಾಗಿಯಾಗುವ ಸಾಧ್ಯತೆ ಕಡಿಮೆ. ಇಬ್ಬರೂ ಕೂಡಾ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸುತ್ತಾರೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ: 4ಗಂಟೆ, 100 ಪ್ರಶ್ನೆ... ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ದಾಖಲಿಸಿದ ಅಡ್ವಾಣಿ!
ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಹಾಗೂ ಉತ್ತರಪ್ರದೇಶ ಮಾಜಿ ಸಿಎಂ ಕಲ್ಯಾಣ ಸಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಬಾಬ್ರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಲಕ್ನೋದ ಸಿಬಿಐನ ವಿಶೇಷ ಕೋರ್ಟ್ ಮುಂದೆ ಅಡ್ವಾಣಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಸುಮಾರು 4 ಗಂಟೆಗೂ ಹೆಚ್ಚು ಸಮಯ ವಿಚಾರಣೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುರಳಿ ಮನೋಹರ್ ಜೋಶಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.
ಸಿಬಿಐ ವಿಶೇಷ ಕೋರ್ಟ್ ಈ ಪ್ರಕರಣ ಸಂಬಂಧ ಈಗಾಗಲೇ ಜೋಶಿ, ಉಮಾ ಭಾರತಿ ಸೇರಿದಂತೆ ಅನೇಕರ ಹೇಳಿಕೆ ಪಡೆದುಕೊಂಡಿದೆ. ಅಡ್ವಾಣಿ, ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ ಹಾಗು ಸಂಸದರಾದ ಬ್ರಿಜ್ ಭೂಷಣ್ ಸಿಂಗ್, ಸಾಕ್ಷಿ ಮಹಾರಾಜ್, ಭೂಷಣ ಸಿಂಗ್, ಆರ್.ಎನ್.ಶ್ರೀವಾಸ್ತವ್, ಲಲ್ಲು ಸಿಂಗ್ ಸೇರಿದಂತೆ 32 ಜನರ ವಿರುದ್ಧ ವಿಚಾರಣೆ ನಡೆದಿದೆ.