ನವದೆಹಲಿ: ಜೂನ್ 15ರ ರಾತ್ರಿ ಚೀನಾ-ಭಾರತೀಯ ಯೋಧರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ ಒಬ್ಬ ಯೋಧ ಕೂಡ ನಾಪತ್ತೆಯಾಗಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟನೆ ನೀಡಿದೆ.
ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದು, ಕೆಲ ಯೋಧರು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಕೆಲವೊಂದು ಮಾಧ್ಯಮಗಳಲ್ಲಿ ಬರುತ್ತಿದ್ದವು. ಅದಕ್ಕೆ ಭಾರತೀಯ ಸೇನೆ ಖುದ್ದಾಗಿ ಸ್ಪಷ್ಟನೆ ನೀಡಿದೆ. ಘರ್ಷಣೆಯಲ್ಲಿ ಭಾಗಿಯಾಗಿರುವ ಎಲ್ಲಾ ಯೋಧರ ಮಾಹಿತಿ ನಮ್ಮ ಬಳಿ ಇದೆ ಎಂದಿರುವ ಸೇನೆ, ಚೀನಾ ವಶದಲ್ಲಿ ನಮ್ಮ ಯಾವ ಯೋಧರೂ ಇಲ್ಲ ಎಂದಿದೆ.
ಘರ್ಷಣೆಯಲ್ಲಿ ಭಾಗಿಯಾಗಿದ್ದ ಓರ್ವ ಕರ್ನಲ್ ಸೇರಿ 20 ಯೋಧರು ಹುತಾತ್ಮರಾಗಿದ್ದು, ಚೀನಾದ 45 ಯೋಧರು ಸಾವನ್ನಪ್ಪಿರಬಹುದು ಅಥವಾ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಜತೆಗೆ ಗಾಯಗೊಂಡಿರುವ ಕೆಲ ಯೋಧರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.
ಘರ್ಷಣೆ ನಡೆಯುತ್ತಿದ್ದಂತೆ ಭಾರತದ 10ಕ್ಕೂ ಹೆಚ್ಚು ಯೋಧರು ನಾಪತ್ತೆಯಾಗಿದ್ದಾರೆ ಎಂಬ ವರದಿ ಎಲ್ಲಡೆ ಬಿತ್ತರಗೊಂಡಿತ್ತು. ಇದೀಗ ಸೇನೆ ಅದಕ್ಕೆ ಸ್ಪಷ್ಟನೆ ನೀಡಿದೆ.