ಅಹಮದಾಬಾದ್: ಫೆ.24ರಂದು ವಿಶ್ವದ ದೊಡ್ಡಣ್ಣ ಎನಿಸಿಕೊಳ್ಳುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರುತ್ತಿದ್ದು, ಸ್ವಾಗತಕ್ಕೆ ಗುಜರಾತ್ನ ಅಹಮದಾಬಾದ್ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಇದರ ಮಧ್ಯೆ ಗುಜರಾತ್ನ ಅಹ್ಮದಾಬಾದ್ನಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ಈ ನಡುವೆ ಗುಜರಾತ್ - ದೆಹಲಿ ಪೊಲೀಸರ ನಡುವೆ ಮುಜುಗರಕ್ಕೊಳಗಾಗುವ ಘಟನೆಯೊಂದು ನಡೆದಿರುವುದು ವರದಿಯಾಗಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಮೊಟೆರಾದಲ್ಲಿ ನಡೆಯುವ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕಾಗಿ ಮೈದಾನದೊಳಗೆ ಪ್ರವೇಶಿಸುವ ವಿಚಾರವಾಗಿ ಪೊಲೀಸರ ನಡುವೆ ಘರ್ಷಣೆ ನಡೆದಿದೆ.
ದೆಹಲಿ ಪೊಲೀಸರ ತಂಡವು ಕಠಿಣ ಭದ್ರತಾ ವ್ಯವಸ್ಥೆ ಹೊಂದಿದ್ದು, ಅವರು ಕ್ರೀಡಾಂಗಣದೊಳಗೆ ಪ್ರವೇಶ ಪಡೆದುಕೊಳ್ಳುತ್ತಿದ್ದ ವೇಳೆ, ಗುಜರಾತ್ ಪೊಲೀಸರು ತಡೆಗಟ್ಟಿ ನಿಮಗೆ ನೀಡಿರುವ ವಿಶೇಷ ಪಾಸ್ ತೋರಿಸಿ ಎಂದು ಕೇಳಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ.
ಮೊಟೆರಾ ಕ್ರೀಡಾಂಗಣದ ಸುತ್ತಮುತ್ತಲ್ಲೂ ಭಾರಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಗುಜರಾತ್-ದೆಹಲಿ ಪೊಲೀಸರು ಇದರ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆದರೆ, ತಮ್ಮ ತಮ್ಮ ನಡುವೆ ವೈಮಸ್ಸು ಉಂಟಾಗಿ, ಕೆಲ ಗಂಟೆ ಮುಜುಗರಕ್ಕೊಳಗಾಗುವಂತೆ ಆಯಿತು. ಈ ವೇಳೆ, ಗುಜರಾತ್ ಹಿರಿಯ ಪೊಲೀಸ್ ಅಧಿಕಾರಿ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಿದ್ದಾರೆ.