ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದಿದ್ದಾರೆ, ಅವರಿಂದ ರಾಜ್ಯವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ವ್ಯಂಗ್ಯವಾಡಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣಾ ರ‍್ಯಾಲಿಯಲ್ಲಿ 'ಲಾಲೂ ಯಾದವ್ ಜಿಂದಾಬಾದ್' ಎಂದು ಕೇಳಿಬಂದ ಘೋಷಣೆಗೆ ಪ್ರತಿಕ್ರಿಯಿಸಿದ ತೇಜಸ್ವಿ, ಪ್ರವಾಹಕ್ಕೆ ಬಿಹಾರಕ್ಕೆ ತತ್ತರಿಸಿದ್ದಾಗ ಸಿಎಂ ನಿತೀಶ್ ಕುಮಾರ್ ಎಲ್ಲಿ ಹೋಗಿದ್ದರು ಎಂದು ಜನ ಕೇಳುತ್ತಿದ್ದಾರೆ. ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಉದ್ಯೋಗಾವಕಾಶಗಳನ್ನು ತರಲಾಗಿಲ್ಲ, ಯಾವುದೇ ಕೈಗಾರಿಕೆಗಳನ್ನು ಸ್ಥಾಪಿಸಲಾಗಿಲ್ಲ. ವಲಸಿಗರ ಪ್ರಮಾಣ ಹೆಚ್ಚಾಗಿದೆ, ಬಡತನ ಕಡಿಮೆಯಾಗಲಿಲ್ಲ. ಹೀಗಿರುವಾಗ ಯಾವ ಆಧಾರದ ಮೇಲೆ ಮತ ಚಲಾಯಿಸುವಂತೆ ಜನರ ಬಳಿ ಕೇಳುತ್ತಿದ್ದಾರೆ.
ಸರ್ಕಾರಿ ನೌಕರರು ತಮ್ಮ 50ನೇ ವಯಸ್ಸಿಗೆ ನಿವೃತ್ತಿ ಪಡೆಯುತ್ತಾರೆ ಎಂಬ ಅಧಿಸೂಚನೆಯನ್ನು ನಿತೀಶ್ ಕುಮಾರ್ ಹೊರಡಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದಾಗ ಇದನ್ನು ತೆಗೆದುಹಾಕಲಾಗುತ್ತದೆ. ರ‍್ಯಾಲಿ ವೇಳೆ ಜೆಡಿಯು ಪಕ್ಷ ಕೋವಿಡ್ ನಿಯಮಗಳನ್ನು ಪಾಲಿಸಿಲ್ಲ. ಮತದಾರರಿಗೆ ಆರೋಗ್ಯ ವಿಮೆ ನಿಡುವಂತೆ ನಾನು ಚುನಾವಣಾ ಆಯೋಗದ ಬಳಿ ಮನವಿ ಮಾಡುತ್ತೇನೆ ಎಂದು ಇದೇ ವೇಳೆ ತೇಜಸ್ವಿ ಯಾದವ್ ತಿಳಿಸಿದರು.