ಚೆನ್ನೈ(ತಮಿಳುನಾಡು): ಸಿಎಎ ಜಾರಿಗೆ ತರುವುದಿಲ್ಲ ಎಂಬ ಕೆಲವು ರಾಜ್ಯಗಳ ನಿಲುವು ಅಸಂವಿಧಾನಿಕ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಚೆನ್ನೈ ನಾಗರಿಕರ ವೇದಿಕೆ ಆಯೋಜಿಸಿದ್ದ 'ವಿವಾದಾತ್ಮಕ ಸಿಎಎ' ಎಂಬ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸತ್ ಅಂಗೀಕರಿಸಿದ ಕಾನೂನನ್ನು ಜಾರಿಗೊಳಿಸುವ ಜವಾಬ್ದಾರಿ ಎಲ್ಲರಿಗೂ ಇದೆ ಎಂದು ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಿಎಎಯೊಂದಿಗೆ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಬೆರೆಸುವ ಅಗತ್ಯವಿಲ್ಲ ಎಂದಿದ್ದಾರೆ.
ಕೇರಳ, ಪಂಜಾಬ್ ಸೇರಿದಂತೆ ಕೆಲವು ರಾಜ್ಯ ವಿಧಾನಸಭೆಗಳು ಕಾನೂನಿನ ವಿರುದ್ಧ ಅಂಗೀಕರಿಸಿದ ನಿರ್ಣಯಗಳು ರಾಜಕೀಯ ಹೇಳಿಕೆಗಳಾಗಿದ್ದು, ಅದು ನಮಗೂ ಅರ್ಥವಾಗುತ್ತದೆ. ಆದರೆ, ಅವರು ಅದನ್ನು ಕಾರ್ಯಗತಗೊಳಿಸುವುದಿಲ್ಲ ಎಂದು ಹೇಳುವುದು ಕಾನೂನಿಗೆ ವಿರುದ್ಧವಾಗಿದೆ. ಹೀಗೆ ಹೇಳುವುದು ಅಸಂವಿಧಾನಿಕವಾಗಿದೆ. ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಕಾನೂನನ್ನು ಜಾರಿಗೆ ತರುವ ಜವಾಬ್ದಾರಿ ಈ ದೇಶದ ಪ್ರತಿಯೊಬ್ಬರಿಗೂ ಇದೆ ಎಂದು ನಿರ್ಮಲಾ ಸೀತಾರಾಮನ್ ಒತ್ತಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪೌರತ್ವ ನೀಡುವಲ್ಲಿ ಆಯ್ದ ನೀತಿಯನ್ನು ಅನುಸರಿಸಿದೆ ಎಂಬ ಆರೋಪವನ್ನು ಹಣಕಾಸು ಸಚಿವೆ ತಿರಸ್ಕರಿಸಿದರು. ಪಾಕಿಸ್ತಾನದ ಗಾಯಕ ಅದ್ನಾನ್ ಸಾಮಿ ಸೇರಿದಂತೆ ನೆರೆಯ ದೇಶಗಳ 3,900 ಕ್ಕೂ ಹೆಚ್ಚು ಜನರಿಗೆ ಕಳೆದ ಆರು ವರ್ಷಗಳಲ್ಲಿ ಪೌರತ್ವ ನೀಡಲಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.