ನವದೆಹಲಿ: ನಿರ್ಭಯಾ ಪ್ರಕರಣದ ಇಬ್ಬರು ಆರೋಪಿಗಳು ಕಳೆದ ರಾತ್ರಿ ಊಟ ಮಾಡಿದ್ದರು. ಆದರೆ ಯಾರೊಬ್ಬರೂ ಶುಕ್ರವಾರ ಬೆಳಗ್ಗೆ ಮರಣದಂಡನೆಗೆ ಮುನ್ನ ಬೆಳಗ್ಗಿನ ಉಪಾಹಾರ ಸೇವಿಸಿರಲಿಲ್ಲ ಎಂದು ತಿಹಾರ್ ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2012 ದೆಹಲಿ ಗ್ಯಾಂಗ್ ರೇಪ್ ಪ್ರಕರಣದ ಅಪರಾಧಿಗಳಾದ ಮುಖೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ಸಿಂಗ್ ಅವರನ್ನು ಬೆಳಿಗ್ಗೆ 5.30 ಕ್ಕೆ ಗಲ್ಲಿಗೇರಿಸಲಾಯಿತು. ಇದಕ್ಕೂ ಮುನ್ನ ಈ ನಾಲ್ವರು ಅಪರಾಧಿಗಳು ಸ್ನಾನ ಮಾಡಿರಲಿಲ್ಲ ಅಥವಾ ಬಟ್ಟೆ ಬದಲಾಯಿಸಲಿಲ್ಲ ಎಂದು ಅವರು ತಿಳಿಸಿದ್ದಾರೆ.
ವಿನಯ್ ಮತ್ತು ಮುಖೇಶ್ ರಾತ್ರಿ ಊಟ ಮಾಡಿದ್ದರು. ಊಟದಲ್ಲಿ ರೊಟ್ಟಿ, ದಾಲ್, ಅನ್ನ ಮತ್ತು ಸಬ್ಜಿ ಇತ್ತು. ಅಕ್ಷಯ್ ಸಂಜೆ ಚಹಾ ಸೇವಿಸಿದ್ದ. ಆದರೆ ಊಟ ಮಾಡಲಿಲ್ಲ. ನಾಲ್ವರು ಅಪರಾಧಿಗಳೂ ಬೆಳಗ್ಗೆ ಉಪಹಾರ ಸೇವಿಸಿರಲಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಮರಣದಂಡನೆಗೆ ಕೆಲವು ಗಂಟೆಗಳ ಮೊದಲು, ವಕೀಲ ಗುಪ್ತಾ ಅವರು ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಮುಂಜಾನೆ 2.30 ವಿಚಾರಣೆ ನಡೆಸಿದ ನ್ಯಾಯಾಲಯ ಅವರ ಮನವಿಯನ್ನು ವಜಾಗೊಳಿಸಿ, ಮರಣದಂಡನೆಗೆ ದಾರಿ ಮಾಡಿಕೊಟ್ಟಿತ್ತು.