ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಮುಖೇಶ್ ಸಲ್ಲಿಸಿದದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದು, ಇದರ ವಿರುದ್ಧ ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿಯನ್ನು ತ್ವರಿತ ವಿಚಾರಣೆ ನಡೆಸಬೇಕೆಂದು ಅಪರಾಧಿ ಮುಖೇಶ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ತ್ವರಿತ ವಿಚಾರಣೆಗೆ ಕೋರ್ಟ್ ಸೂಚಿಸಿದೆ.
2012ರ ಡಿಸೆಂಬರ್ನಲ್ಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದಿದ್ದು, ನಾಲ್ವರು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ನಿರ್ಭಯಾ ಅತ್ಯಾಚಾರಿಗಳಿಗೆ ಜನವರಿ 7ರಂದು ದೆಹಲಿ ಕೋರ್ಟ್ ಡೆತ್ ವಾರೆಂಟ್ ಜಾರಿ ಮಾಡಿತ್ತು. ಜನವರಿ 22ರಂದು ನಾಲ್ವರನ್ನು ಗಲ್ಲಿಗೇರಿಸುವಂತೆ ಆದೇಶ ನೀಡಿತ್ತು. ಈ ಮಧ್ಯೆ ನಾಲ್ವರು ಅಪರಾಧಿಗಳು ಕಾನೂನು ಹೋರಾಟ ಮುಂದುವರೆಸಿದ್ದರು. ಅಪರಾಧಿ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ದೆಹಲಿ ಕೋರ್ಟ್, ರಾಷ್ಟ್ರಪತಿ ತೀರ್ಮಾನ ಬರುವವರೆಗೂ ಗಲ್ಲು ಶಿಕ್ಷೆ ಮುಂದೂಡುವಂತೆ ಹೇಳಿತ್ತು.
ಫೆ.1 ಬೆಳಗ್ಗೆ 6 ಗಂಟೆಗೆ ಆರೋಪಿಗಳನ್ನು ಗಲ್ಲಿಗೇರಿಸಲಾಗುತ್ತಿದೆ. ಆದ್ರೆ ಪ್ರಕರಣದ ಅಪರಾಧಿ ಮುಖೇಶ್ ಸಲ್ಲಿಸಿದ್ದ ಕ್ಷಮಾದಾನ ಮನವಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜ.17ರಂದು ತಿರಸ್ಕರಿಸಿದ್ದರು. ಇದರ ವಿರುದ್ಧ ಮುಖೇಶ್ ಅರ್ಜಿ ಸಲ್ಲಿಸಿದ್ದರು. ಇಂದು ಸುಪ್ರೀಂಕೋರ್ಟ್ಗೆ ತೆರಳಿದ ಅಪರಾಧಿ ಮುಖೇಶ್, ತಾನು ಸಲ್ಲಿಸಿದ ಅರ್ಜಿಯ ಬಗ್ಗೆ ತುರ್ತು ವಿಚಾರಣೆ ನಡೆಸಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದ.
ಈ ಬಗ್ಗೆ ನ್ಯಾ. ಬಿ ಆರ್ ಗವಾಯಿ, ನ್ಯಾ. ಸೂರ್ಯ ಕಾಂತ್ ಮತ್ತು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಒಳಗೊಂಡ ತ್ರಿದಸ್ಯ ಪೀಠ ಮುಖೇಶ್ ಸಲ್ಲಿಸಿದ್ದ ಮನವಿಗೆ ಉತ್ತರಿಸಿದೆ. ‘ಗಲ್ಲಿಗೇರುವ ಅಪರಾಧಿಗಳು ಸಲ್ಲಿಸುವ ಅರ್ಜಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತೆ’ ಎಂದು ಕೋರ್ಟ್ ಹೇಳಿದೆ. ಹೀಗಾಗಿ ಅಪರಾಧಿ ಮುಖೇಶ್ ಸಲ್ಲಿಸಿದ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಲು ಸುಪ್ರೀಂ ಮುಂದಾಗಿದೆ.