ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳ ಮರಣ ದಂಡನೆ ಶಿಕ್ಷೆ ಮತ್ತಷ್ಟು ವಿಳಂಬವಾಗುತ್ತಿದೆ.
ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಠಾಕೂರ್ ಈ ಹಿಂದೆ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ತಿರಸ್ಕರಿಸಿದ್ದು, ಆ ಅರ್ಜಿ ಅಪೂರ್ಣವಾಗಿತ್ತು ಎಂಬ ನೆಪ ಹೇಳಿ ಇದೀಗ ಮತ್ತೆ ಹೊಸದಾಗಿ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ.
ಈ ಕುರಿತು ದೆಹಲಿ ಕೋರ್ಟ್ಗೆ ಮಾಹಿತಿ ನೀಡಿರುವ ಅಪರಾಧಿ ಪರ ವಕೀಲ ಎ.ಪಿ.ಸಿಂಗ್, ಈ ಹಿಂದೆ ಸಲ್ಲಿಸಿದ್ದ ಅರ್ಜಿಯಲ್ಲಿ ಪೂರ್ತಿ ಅಂಶಗಳು ಇರಲಿಲ್ಲ. ಹೀಗಾಗಿ ಮತ್ತೆ ಕ್ಷಮಾದಾನ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿಯು ರಾಷ್ಟ್ರಪತಿಗಳ ಕಾರ್ಯದರ್ಶಿಗೆ ತಲುಪಿದೆ ಎಂದು ತಿಳಿಸಿದ್ದಾರೆ.
ಇನ್ನು ಶುಕ್ರವಾರವಷ್ಟೇ ಪ್ರಕರಣದ ಇನ್ನೋರ್ವ ಅಪರಾಧಿಯಾದ ಪವನ್ ಕುಮಾರ್ ಗುಪ್ತಾ, ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಂತೆ ಕೋರಿ ಸುಪ್ರೀಂಕೋರ್ಟ್ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದ.