ನವದೆಹಲಿ: ಸುದೀರ್ಘ ಏಳು ವರ್ಷಗಳ ಕಾಯುವಿಕೆಯ ಬಳಿಕ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಬಗ್ಗೆ ಇಂದು ಅಂತಿಮ ಆದೇಶ ಹೊರ ಬೀಳುವ ಸಾಧ್ಯತೆಯಿದೆ. ಈಗಾಗಲೇ ಅಪರಾಧಿಗಳನ್ನು ತಿಹಾರ್ ಜೈಲಿನಲ್ಲಿರಿಸಲಾಗಿದ್ದು, ಜೈಲು ಅಧಿಕಾರಿಗಳು ಮರಣದಂಡನೆಗೆ ಅಂತಿಮ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ಕಾಯುತ್ತಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.
ಇನ್ನು ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ಹೊಸ ವಧಾಸ್ಥಳವನ್ನು ನಿರ್ಮಿಸಲಾಗುತಿದ್ದು, ಜೈಲು ಸಂಖ್ಯೆ ಮೂರರಲ್ಲಿ ಈ ಈ ಮೊದಲು ವಧಾಸ್ಥಳ ಇತ್ತು, ಅದರ ಪಕ್ಕದಲ್ಲೇ ನೂತನ ವಧಾಸ್ಥಳವನ್ನು ನಿರ್ಮಿಸಲಾಗುತ್ತಿದೆ.
ಲೋಕೋಪಯೋಗಿ ಇಲಾಖೆಯಿಂದ ವಧಾ ಸ್ಥಳ ನಿರ್ಮಾಣ:
ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆ ತಿಹಾರ್ ಜೈಲು ಸಂಖ್ಯೆ 3 ರಲ್ಲಿ ಹೊಸ ವಧಾ ಸ್ಥಳವನ್ನು ನಿರ್ಮಿಸುತ್ತಿದೆ. ಹಳೆಯ ವಧಾ ಸ್ಥಳದ ಕೇವಲ 10 ಅಡಿ ದೂರದಲ್ಲಿ ಈ ಹೊಸ ವಧಾ ಸ್ಥಳ ನಿರ್ಮಿಸಲಾಗುತ್ತಿದೆ. ಇದರಲ್ಲಿ ಇಬ್ಬರನ್ನು ಏಕಕಾಲದಲ್ಲಿ ಗಲ್ಲಿಗೇರಿಸಬಹುದು. ಹಳೆಯ ವಧಾ ಸ್ಥಳಕ್ಕಿಂತ ಸ್ವಲ್ಪ ಬದಲಾವಣೆಯನ್ನು ನೂತನ ವಧಾ ಸ್ಥಳದಲ್ಲಿ ಮಾಡಲಾಗಿದ್ದು, ಇದಕ್ಕಾಗಿ ದೆಹಲಿ ಸರ್ಕಾರ ಸುಮಾರು 25 ಲಕ್ಷ ರೂಪಾಯಿಗಳನ್ನು ವ್ಯಯಿಸುತ್ತಿದೆ.
ನಿರ್ಭಯಾ ತಾಯಿಯ ಸಲ್ಲಿಸಿದ ಅರ್ಜಿ ಇಂದು ವಿಚಾರಣೆ :
ಅಪರಾಧಿಗಳು ಬೇಗ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ನಿರ್ಭಯಾ ತಾಯಿ ಅರ್ಜಿ ಸಲ್ಲಿಸಿದ್ದರು, ಈ ಅರ್ಜಿಯ ವಿಚಾರಣೆ ನಡೆಸಿದ ಪಟಿಯಾಲ ಹೌಸ್ ಕೋರ್ಟ್ ವಿಚಾರಣೆಯನ್ನು ಜನವರಿ 7ಕ್ಕೆ ಮುಂದೂಡಿತ್ತು, ಆದ್ದರಿಂದ ಈ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.