ರಾಯಪುರ (ಛತ್ತೀಸ್ಗಢ): ವನ್ಯ ಜೀವಿ ಸಂರಕ್ಷಣಾಲಯದಲ್ಲಿದ್ದ ಕಾಡುಕೋಣವನ್ನು ಕೊಂದ ಆರೋಪದಲ್ಲಿ 9 ಮಂದಿಯನ್ನು ಬಂಧಿಸಿದ ಘಟನೆ ಛತ್ತೀಸ್ಗಢದ ಕಬೀರ್ಧಾಮ್ ಜಿಲ್ಲೆಯಲ್ಲಿ ನಡೆದಿದೆ.
ರಾಯಪುರದಿಂದ 140 ಕಿಲೋಮೀಟರ್ ದೂರದಲ್ಲಿರುವ ಬೋರಮ್ ದೇವ್ ವನ್ಯಜೀವಿ ಸಂರಕ್ಷಣಾಲಯದ ಚಿಲ್ಫಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ನಂದಿನಿ ತೊಲಾ ಗ್ರಾಮದಲ್ಲಿ ವಿದ್ಯುತ್ ಶಾಕ್ಗೆ ಸಿಕ್ಕಿ ಕಾಡುಕೋಣವೊಂದು ಸತ್ತಿತ್ತು.
ಈ ಪ್ರದೇಶದಲ್ಲಿ ಅರಣ್ಯ ಇಲಾಖೆ ತನಿಖೆ ನಡೆಸಿದಾಗ ದುಷ್ಕರ್ಮಿಗಳು ಬೇಟೆಗಾಗಿ ವಿದ್ಯುತ್ ಹರಿಸಿದ್ದ ಕಬ್ಬಿಣದ ತಂತಿಗಳಿಗೆ ಸಿಲುಕಿ ಕಾಡುಕೋಣ ಮೃತಪಟ್ಟಿರುವುದಾಗಿ ಕಂಡುಬಂತು. ಅಂಚನ್ ಕುಮಾರ್ ಹುಲಿ ಸಂರಕ್ಷಣಾ ತಾಣದಿಂದ ಕರೆಸಲಾದ ಶ್ವಾನಗಳ ಸಹಾಯದಿಂದ ತನಿಖೆ ಆರಂಭಿಸಿದ ಪೊಲೀಸರು ನಂದಿನಿ ಹಾಗೂ ಕುಮಾನ್ ಗ್ರಾಮಗಳಿಂದ 9 ಮಂದಿಯನ್ನು ಬಂಧಿಸಿದ್ದಾರೆ.
ತಾವು ಸಣ್ಣ ಪ್ರಾಣಿ ಪ್ರಾಣಿಗಳನ್ನು ಬೇಟೆಯಾಡಲು ಕಬ್ಬಿಣದ ತಂತಿಗಳಲ್ಲಿ ವಿದ್ಯುತ್ ಹರಿಸಿದ್ದಾಗಿ, ಅಕಸ್ಮಿಕವಾಗಿ ಕಾಡುಕೋಣ ಸಿಲುಕಿ ಸತ್ತಿದೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಭಾರತೀಯ ಅರಣ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆಯುತ್ತಿದೆ.