ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಹೆಚ್‌ಎಐ) ಏಪ್ರಿಲ್ 20ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಪುನರಾರಂಭಿಸಲಿದೆ.
ಕೊರೊನಾ ವೈರಸ್ ಲಾಕ್ಡೌನ್ ಹಿನ್ನೆಲೆ ಕಳೆದ ಮಾರ್ಚ್ 25ರಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ವಸೂಲಾತಿಗೆ ವಿನಾಯಿತಿ ನೀಡಿ ಸರ್ಕಾರ ಆದೇಶಿಸಿತ್ತು. ಟೋಲ್ ಸಂಗ್ರಹ ಪುನರಾರಂಭಿಸುವವ ಬಗ್ಗೆ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‌ಹೆಚ್‌ಎಐ)ಗೆ ಪತ್ರ ಬರೆದಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಗೃಹ ಸಚಿವಾಲಯ ವಿನಾಯಿತಿ ನೀಡಿದ ಕೆಲ ವಾಹನಗಳನ್ನು ಹೊರತುಪಡಿಸಿ ಏಪ್ರಿಲ್ 20ರಿಂದ ಇತರ ವಾಹನಗಳಿಂದ ಟೋಲ್ ವಸೂಲು ಸಂಗ್ರಹಿಸುವಂತೆ ತಿಳಿಸಿದೆ.
ಅಲ್ಲದೆ, ಏಪ್ರಿಲ್ 20ರ ಬಳಿಕ ಗೃಹ ಸಚಿವಾಲಯ ವಾಣಿಜ್ಯ, ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಚಟುವಟಿಕೆಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಏಪ್ರಿಲ್ 11 ಮತ್ತು 14ರಂದು ಬರೆದ ಪತ್ರದಲ್ಲಿ ತಿಳಿಸಲಾಗಿದೆ ಎಂದಿದೆ. ಇದರ ಜೊತೆಗೆ ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರದ ಬೊಕ್ಕಸಕ್ಕೆ ಬಲ ನೀಡುವ ಉದ್ದೇಶದಿಂದ ಸುಂಕ ವಸೂಲಾತಿ ಪುನರಾರಂಭಿಸುವುದಾಗಿ ಪತ್ರದಲ್ಲಿ ಉಲ್ಲೇಖಿಸಿದೆ.