ಗುವಾಹಾಟಿ: ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ದೇಶದ ಅತೀ ಉದ್ದದ ಬೋಗಿಬಿಲ್ ರೈಲು ಹಾಗೂ ರಸ್ತೆ ಮೇಲ್ಸೇತುವೆ ನಿರ್ಮಿಸಿದ ಬಳಿಕ ಇದೇ ನದಿಗೆ 'ರೋಪ್ ವೇ' ನಿರ್ಮಿಸುವ ಯೋಜನೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.
ಬ್ರಹ್ಮಪುತ್ರ ನದಿ ಮೇಲೆ ಸಾಕಾರಗೊಳ್ಳುತ್ತಿರುವ ರೋಪ್ ವೇ ದೇಶದ ಅತಿ ಉದ್ದದ ಹಾಗೂ ಹಗ್ಗದ ದಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 180 ದಿನಗಳಲ್ಲಿ ಈ ರೋಪ್ ವೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಸುಮಾರು 2 ಕಿ.ಮೀ. ಉದ್ದದ ರೋಪ್ ವೇ ಬ್ರಹ್ಮಪುತ್ರ ನದಿಯ ದಕ್ಷಿಣ ಭಾಗದ ಕಚರಿ ಘಾಟ್ನ ಪನ್ಬಝಾರ್-ಉತ್ತರ ಭಾಗದ ಗೋವಿಂದ ದೇವಸ್ಥಾನದ ನಡುವೆ ಹಾದು ಹೋಗಲಿದೆ.
ರಸ್ತೆ ಹಾಗೂ ಜಲ ಮಾರ್ಗದ ಮೂಲಕ ನದಿ ದಾಟಲು ಸುಮಾರು 20-30 ನಿಮಿಷ ತಗಲುತ್ತದೆ. ಆದರೆ, ಈ ರೋಪ್ ವೇ ಮೂಲಕ ಕೇವಲ 7 ನಿಮಿಷದಲ್ಲಿ ಕ್ರಮಿಸಬಹುದು. ಏಕಕಾಲದಲ್ಲಿ 25-28 ಜನರನ್ನು ಕರೆದೊಯ್ಯುವ ಸಾಮರ್ಥ ಇದು ಹೊಂದಿದೆ.
ಗುವಾಹಟಿ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಮಾತನಾಡಿ, ರೋಪ್ ವೇ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಮುಂದಿನ 180 ದಿನಗಳಲ್ಲಿ ಸಾರ್ವಜನಿಕರ ಸೇವೆಗೆ ದೊರೆಯಲಿದೆ. ಉತ್ತರ ಗುವಾಹಟಿಯಿಂದ-ಗುವಾಹಟಿ ತಲುಪಲು ಕೇವಲ 7 ನಿಮಿಷ ತಗಲುತ್ತದೆ ಎಂದು ಹೇಳಿದರು.