ತಿರುವನಂತಪುರಂ (ಕೇರಳ): ಅಮೇಥಿ ಸೇರಿದಂತೆ ಅನೇಕ ವಲಸಿಗ ಕಾರ್ಮಿಕರು ಆಹಾರ ಮತ್ತು ಪಡಿತರ ವಸ್ತುಗಳಿಲ್ಲದೆ ಮಲಪ್ಪುರಂ ಜಿಲ್ಲೆಯ ಕರುವಾರಕುಂಡಿನಲ್ಲಿ ಸಿಲುಕಿಕೊಂಡಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ರಕ್ಷಣೆಗೆ ಬರಬೇಕಾಯಿತು ಎಂಬ ಸುದ್ದಿಗಳನ್ನು ಕೇರಳ ಅಧಿಕಾರಿಗಳು ಅಲ್ಲಗಳೆದಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಹಳೆಯ ಕ್ಷೇತ್ರವಾದ ಅಮೇಥಿಯ ಈಗಿನ ಬಿಜೆಪಿ ಸಂಸದೆ ಇರಾನಿಯವರ ಮಧ್ಯಪ್ರವೇಶದಿಂದಾಗಿ, ಈ ಕಾರ್ಮಿಕರಿಗೆ ಆಹಾರ ಮತ್ತು ಪಡಿತರ ವಸ್ತುಗಳು ದೊರೆತಿವೆ ಎಂದು ಹಳೆ ವರದಿಯೊಂದು ತಿಳಿಸಿತ್ತು.
ಆದರೆ ವಲಸೆ ಕಾರ್ಮಿಕರು ಕೇರಳ ರಾಜ್ಯ ಸರ್ಕಾರದಿಂದ ಅಗತ್ಯ ಸಾಮಗ್ರಿಗಳನ್ನು ಪಡೆಯುತ್ತಿದ್ದಾರೆ. ಅವರಿಗೆ ಬೇಕಾದ ವಸತಿ ಸೌಕರ್ಯದ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಸ್ಥಳೀಯ ಗ್ರಾಮ ಮಟ್ಟದ ಅಧ್ಯಕ್ಷರು ಕೂಡಾ ಮಾಧ್ಯಮಗಳಲ್ಲಿ ಬಂದ ಸುದ್ದಿ ಸಂಪೂರ್ಣ ಆಧಾರರಹಿತ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಇಂದು ವಯನಾಡು ಸಂಸದ ರಾಹುಲ್ ಗಾಂಧಿಯವರ ಕಚೇರಿ ಮಾಧ್ಯಮಗಳಿಗೆ ಮಾಹಿತಿ ನೀಡಿ, ತಮ್ಮ ಲೋಕಸಭಾ ಕ್ಷೇತ್ರದ ಸ್ಥಳೀಯ ಸಂಸ್ಥೆ (51 ಗ್ರಾಮ ಮಂಡಳಿಗಳು ಮತ್ತು ಐದು ಪುರಸಭೆಗಳು)ಗಳ ಎಲ್ಲಾ ಸಮುದಾಯದ ಮನೆಗಳಿಗೂ ಅಗತ್ಯ ವಸ್ತುಗಳನ್ನು ಪೂರೈಸುವ ವ್ಯವಸ್ಥೆಯನ್ನು ರಾಹುಲ್ ಗಾಂಧಿ ಮಾಡಿದ್ದಾರೆ. ಒಟ್ಟು 28,000 ಕೆಜಿ ಅಕ್ಕಿ ಮತ್ತು 6,000 ಕೆಜಿಗೂ ಹೆಚ್ಚು ದ್ವಿದಳ ಧಾನ್ಯಗಳು ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಗುರುವಾರದ ವೇಳೆಗೆ ತಲುಪಲಿದೆ ಎಂದು ಸ್ಪಷ್ಟನೆ ನೀಡಿದೆ.
ರಾಹುಲ್ ಗಾಂಧಿ ಇಲ್ಲಿರುವ ತಮ್ಮ ಸ್ಥಳೀಯ ಕಚೇರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಲಾಕ್ಡೌನ್ ಮುಗಿದ ತಕ್ಷಣವೇ ಅವರು ತಮ್ಮ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಈ ಮಧ್ಯೆ ಅವರು ಎಲ್ಲಾ ಜಿಲ್ಲಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಸಂಸದರ ಕಚೇರಿಯಿಂದ ಮಾಹಿತಿ ಸಿಕ್ಕಿದೆ.