ನವದೆಹಲಿ: ಭಾರತದಲ್ಲಿ ಅತಿ ಹೆಚ್ಚಾಗಿ ಬಳಸಲ್ಪಡುವ ಮೆಸೇಜಿಂಗ್ ಸೇವೆಯಾಗಿರುವ ವಾಟ್ಸ್ಆ್ಯಪ್ ನೂತನ ಫನ್ನಿ ಹಾಗೂ ಆ್ಯನಿಮೇಟೆಡ್ ಸ್ಟಿಕ್ಕರ್ಗಳು, ಕ್ಯೂಆರ್ ಕೋಡ್ಗಳನ್ನು ಬಿಡುಗಡೆ ಮಾಡಿದ್ದು, ಗ್ರೂಪ್ ವಿಡಿಯೋ ಕಾಲಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಿದೆ. ಜಗತ್ತಿನಾದ್ಯಂತ ಇರುವ ಸುಮಾರು 2 ಬಿಲಿಯನ್ ವಾಟ್ಸ್ಆ್ಯಪ್ ಬಳಕೆದಾರರು ಈ ಹೊಸ ಫೀಚರ್ಗಳನ್ನು ಬಳಸಬಹುದಾಗಿದೆ.
ಈಗಾಗಲೇ ನಿತ್ಯ ಬಿಲಿಯನ್ಗಟ್ಟಲೇ ಆ್ಯನಿಮೇಟೆಡ್ ಸ್ಟಿಕ್ಕರ್ಗಳನ್ನು ವಾಟ್ಸ್ಆ್ಯಪ್ ಬಳಕೆದಾರರು ವಿನಿಮಯ ಮಾಡಿಕೊಳ್ಲುತ್ತಿದ್ದು, ದಿನೇ ದಿನೇ ಇವುಗಳ ಜನಪ್ರಿಯತೆ ಜಾಸ್ತಿಯಾಗುತ್ತಿದೆ. ಹೀಗಾಗಿ ಈಗಿರುವುದಕ್ಕಿಂತಲೂ ಹೆಚ್ಚು ಖುಷಿ ನೀಡುವ ಮತ್ತಷ್ಟು ಫನ್ನಿ ಆ್ಯನಿಮೇಟೆಡ್ ಸ್ಟಿಕ್ಕರ್ಗಳನ್ನು ಬಳಕೆದಾರರಿಗಾಗಿ ತಂದಿದ್ದೇವೆ ಎಂದು ಫೇಸ್ಬುಕ್ ಒಡೆತನದ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಈಗ ಹೊಸ ಕಾಂಟ್ಯಾಕ್ಟ್ ನಂಬರ್ ಸೇರಿಸುವುದನ್ನು ಮತ್ತೂ ಸುಲಭವಾಗಿಸಲಾಗಿದೆ. ಹೊಸಬರನ್ನು ಭೇಟಿಯಾದಾಗ ಅವರ ವಾಟ್ಸ್ಆ್ಯಪ್ನಿಂದ ಕೇವಲ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅವರ ಸಂಖ್ಯೆಯನ್ನು ಕಾಂಟ್ಯಾಕ್ಟ್ ಲಿಸ್ಟ್ಗೆ ಸೇರಿಸಬಹುದಾಗಿದೆ.
ಬರುವ ಕೆಲ ವಾರಗಳಲ್ಲಿ ಅಪ್ಡೇಟ್ನಲ್ಲಿ ಹೊಸ ಫೀಚರ್ಗಳು ಲಭ್ಯವಾಗಲಿವೆ. ವಿಡಿಯೋ ಐಕಾನ್ ಮೇಲೆ ಜಸ್ಟ್ ಒಂದು ಬಾರಿ ಒತ್ತುವ ಮೂಲಕ ಗ್ರೂಪ್ ವಿಡಿಯೋ ಕಾಲ್ ಮಾಡುವ ಸೌಲಭ್ಯ ಅಳವಡಿಸಲಾಗಿದೆ. ಈಗ 8 ಜನರೊಂದಿಗೆ ವಿಡಿಯೋ ಕಾಲ್ ಮಾಡಬಹುದಾಗಿದ್ದು, ನಿಮಗಿಷ್ಟವಾದವರ ವಿಡಿಯೋವನ್ನು ಫುಲ್ ಸ್ಕ್ರೀನ್ ಮಾಡಲು ಅವಕಾಶ ನೀಡಲಾಗಿದೆ. ಹಾಗೆಯೇ ವೆಬ್ ಹಾಗೂ ಡೆಸ್ಕ್ಟಾಪ್ ಮಾದರಿಗಳಲ್ಲಿ ಡಾರ್ಕ್ ಮೋಡ್ ಫೀಚರ್ ಆರಂಭಿಸಲಾಗಿದೆ.