ಇತ್ತೀಚೆಗೆ ಜಾರಿಗೊಳಿಸಲಾದ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಬಿಜೆಪಿಗೆ ಚುನಾವಣೆಯಲ್ಲಿ ಲಾಭವಾಗಬಹುದು ಎಂದು ವಿಪಕ್ಷಗಳಿಗೆ ಆತಂಕ ಉಂಟಾಗಲು ಕಾರಣಗಳಿವೆ. ಈ ಕಾಯ್ದೆ ಮತದಾರರನ್ನು ಹಿಂದೂ ಮುಸ್ಲಿಂ ಎಂದು ಸ್ಪಷ್ಟವಾಗಿ ವಿಭಜನೆ ಮಾಡಿಬಿಡಬಹುದು ಎಂಬುದೇ ಈ ಆತಂಕ. ಹಾಗಂತ ಬಿಜೆಪಿ ಯಾವ ಮಟ್ಟಿಗೆ ನಿರೀಕ್ಷೆ ಇಟ್ಟುಕೊಂಡಿದೆಯೋ ಅಥವಾ ವಿರೋಧ ಪಕ್ಷಗಳು ಯಾವ ಮಟ್ಟದ ಗುಮಾನಿ ಇಟ್ಟುಕೊಂಡಿವೆಯೋ ಅಷ್ಟು ಮಟ್ಟದ ಲಾಭ ಬಿಜೆಪಿಗೆ ಆಗುವುದು ಸಂದೇಹ.
ಹೊಸ ಕಾನೂನಿಗೆ ವಿರೋಧ ಪಕ್ಷಗಳು ಯಾವ ರೀತಿಯಲ್ಲಿ ಪ್ರತಿಕ್ರಿಯೆ ತೋರುತ್ತವೆ ಎಂಬುದರ ಮೇಲೆ ಬಿಜೆಪಿಗೆ ಈ ಕಾನೂನಿನಿಂದ ಎಷ್ಟು ಲಾಭವಾಗುತ್ತದೆ ಅಥವಾ ಎಷ್ಟು ನಷ್ಟವಾಗುತ್ತದೆ ಎಂಬುದು ತೀರ್ಮಾನವಾಗುತ್ತದೆ. ನನಗನಿಸುವ ಪ್ರಕಾರ ಈ ಕಾನೂನಿಗೆ ವಿಪಕ್ಷಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದಷ್ಟೂ ಹೆಚ್ಚು ಲಾಭ ಬಿಜೆಪಿಗಾಗಲಿದೆ. ವಿಪಕ್ಷಗಳು ಕಡಿಮೆ ತೀವ್ರತೆಯಲ್ಲಿ ಪ್ರತಿಕ್ರಿಯಿಸಿದರೆ ಬಿಜೆಪಿಗೆ ಕಡಿಮೆ ಲಾಭವಾಗಬಹುದು. ಪೌರತ್ವ ಕಾನೂನಿಗೆ ವಿರೋಧ ಪಕ್ಷಗಳು ಬಹಳ ಗಟ್ಟಿಯಾದ ಪ್ರತಿರೋಧ ತೋರಿದ ಪಕ್ಷದಲ್ಲಿ ಮತದಾರರು ಧರ್ಮದ ಆಧಾರದಲ್ಲಿ ವಿಭಜನೆಗೊಂಡು ಬಿಜೆಪಿಗೆ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಲಾಭ ತಂದುಕೊಡುವ ಸಾಧ್ಯತೆ ಇದೆ. ದೇಶದಾದ್ಯಂತ ಪೌರತ್ವ ಕಾಯಿದೆಗೆ ಬೃಹತ್ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದರೂ ಹೊಸ ಕಾಯಿದೆಗೆ ಗಣನೀಯ ಮಟ್ಟದಲ್ಲಿ ಬೆಂಬಲವೂ ವ್ಯಕ್ತವಾಗುತ್ತಿರುವುದನ್ನು ಕಾಣಬಹುದು.
ಸಾಮಾನ್ಯ ಜನರಲ್ಲಿ ಈ ಕಾಯಿದೆಗೆ ಬೆಂಬಲ ನೀಡುತ್ತಿರುವ ದೊಡ್ಡ ಸಂಖ್ಯೆಯ ಜನರಿದ್ದಾರೆ ಎಂಬುದನ್ನು ನೋಡಬಹುದು. ಯಾಕೆಂದರೆ ಅವರ ಪ್ರಕಾರ ಈ ಕಾಯಿದೆ ಜಾರಿಯಾಗಿರುವುದು ಎಂದರೆ ಅಫಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಬಂದು ಅಕ್ರಮವಾಗಿ ವಾಸಿಸುತ್ತಿರುವ ಮುಸ್ಲಿಮರನ್ನು ಅವರ ದೇಶಗಳಿಗೆ ಕಳಿಸುವುದು ಎಂದು ಸರಳವಾಗಿ ಅರ್ಥಮಾಡಿಕೊಂಡಿದ್ದಾರೆ.
ಶ್ರೀಸಾಮಾನ್ಯರಾದವರು ಯಾವ ಧರ್ಮದವರಿಗೆ ವಿನಾಯಿತಿ ಸಿಕ್ಕಿದೆ, ಕಟಾಫ್ ದಿನಾಂಕ ಯಾವುದು ಈ ಎಲ್ಲಾ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಪೌರತ್ವ ಕಾಯಿದೆಯ ಮೂಲಕ ರಾಜಕಾರಣ ಮಾಡುತ್ತಿರುವ ಬಗ್ಗೆ ವಿರೋಧ ಪಕ್ಷಗಳು ಬಿಜೆಪಿ ಮೇಲೆ ಠೀಕಾಪ್ರಹಾರ ನಡೆಸುತ್ತಿರುವುದು ಸಾಮಾನ್ಯ ಜನರಿಗೆ ಅಲ್ಪಸಂಖ್ಯಾತರನ್ನು ವಿರೋಧ ಪಕ್ಷಗಳು ಓಲೈಸುತ್ತಿರುವಂತೆ ಭಾಸವಾಗುತ್ತಿದೆ. ಅಂತಿಮವಾಗಿ ಇದು ಜನರನ್ನು ಧ್ರುವೀಕರಣಗೊಳಿಸಬಹುದು. ಇದರ ಲಾಭ ಪಡೆಯುವುದು ಬಿಜೆಪಿಯಾಗಿರುತ್ತದೆ.
ಹೊಸ ಪೌರತ್ವ ಕಾಯ್ದೆಗೆ ಇರುವ ವಿರೋಧಕ್ಕಿಂತಲೂ ಅದಕ್ಕಿರುವ ಬೆಂಬಲ ಹೆಚ್ಚಿದೆ ಎಂಬುದರಲ್ಲಿ ಸಂದೇಹವಿಲ್ಲ ಆದರೆ ಆ ಬೆಂಬಲಕ್ಕೆ ಅನುಗುಣವಾಗಿ ಬಿಜೆಪಿ ಚುನಾವಣೆಯಲ್ಲಿ ಲಾಭ ಪಡಯಲಿಕ್ಕಿಲ್ಲ. ಹೀಗೆ ಹೇಳಲು ಇರುವ ಕಾರಣಗಳು ಸರಳವಾಗಿವೆ. 2019ರ ಲೋಕಸಭಾ ಚುನಾವಣೆಗಳ ಸಮಯದಲ್ಲಿ ಬಿಜೆಪಿಯು ಶೇಕಡಾ 37% ಮತಪಾಲು ಪಡೆದು 303 ಸೀಟುಗಳನ್ನು ಪಡೆದುಕೊಂಡಿತ್ತು. ಆದರೆ ಬಿಜೆಪಿ ಪಕ್ಷಕ್ಕೆ ಕರ್ನಾಕವೊಂದನ್ನು ಹೊರತುಪಡಿಸಿದರೆ ವಿಂಧ್ಯದ ಆಚೆಗೆ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ದಕ್ಷಿಣ ರಾಜ್ಯಗಳಲ್ಲಿ ಪೌರತ್ವ ಕಾಯ್ದೆ ಒಂದು ವಿಷಯವೇ ಅಲ್ಲ. ಕೇರಳ, ಆಂಧ‍್ರ ಮತ್ತು ತೆಲಂಗಾಣದಲ್ಲಿ ಮಾತ್ರ ಗಣನೀಯ ಸಂಖ್ಯೆಯ ಮುಸ್ಲಿಮರಿದ್ದಾರೆ. ಈ ರಾಜ್ಯಗಳು ಅಕ್ರಮ ವಲಸೆ ಆಗುವಂತಹ ಯಾವುದೇ ದೇಶದೊಂದಿಗೆ ಗಡಿಗಳನ್ನು ಹಂಚಿಕೊಳ್ಳುವುದಿಲ್ಲವಾದ್ದರಿಂದ ಅಲ್ಲಿನ ಜನರಿಗೆ ಅದು ದೊಡ್ಡ ವಿಷಯವಾಗುವುದಿಲ್ಲ. ಬಿಜೆಪಿಯು ದಕ್ಷಿಣದ ರಾಜ್ಯಗಳಲ್ಲಿ ವಿಸ್ತರಣೆ ಮಾಡಿಕೊಳ್ಳಬಹುದು, ಕೆಲವು ದಕ್ಷಿಣ ರಾಜ್ಯಗಳಲ್ಲಿ ಅದು ತನ್ನ ಬೆಂಬಲ ನೆಲೆಯನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಯಾವಾಗಲೂ ಇದ್ದೇ ಇದೆ, ಆದರೆ ಪೌರತ್ವ ಕಾಯಿದೆಯನ್ನು ಜನರು ಬೆಂಬಲಿಸುವುದರಿಂದ ಬಿಜೆಪಿಗೆ ಚುನಾವಣೆಯಲ್ಲಿ ಸಿಗುವ ಬೆಂಬಲಾಗಿರುವುದಿಲ್ಲ.
ಉತ್ತರ ಪ್ರದೇಶ, ಮಧ್ಯ ಪ್ರದೇಶ, ಚತ್ತೀಸ್ ಗಡ, ರಾಜಾಸ್ತಾನ, ಜಾರ್ಖಂಡ್ ಮತ್ತು ಬಿಹಾರಗಳಲ್ಲಿ ಮುಸ್ಲಿಮರು ಬೇರೆ ಬೇರೆ ಮಟ್ಟದಲ್ಲಿ ಪೌರತ್ವ ಕಾಯ್ದೆಗೆ ತಮ್ಮ ವಿರೋಧ ಸೂಚಿಸಿದರು, ಆದರೆ ಅಂತಹ ಪ್ರತಿರೋಧವನ್ನು ಯಶಸ್ವಿಯಾಗಿ ದಮನಿಸಲಾಯಿತು. ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರವಾದೊಡನೆ ದೊಡ್ಡ ಮಟ್ಟದಲ್ಲಿ ಪ್ರತಿರೋಧ ವ್ಯಕ್ತವಾದರೂ ಈ ರಾಜ್ಯಗಳೂ ಸಹ ಅಕ್ರಮ ವಲಸೆಗೆ ಅನುವು ಮಾಡಿಕೊಡುವ ಯಾವುದೇ ನೆರೆಯ ದೇಶದೊಂದಿಗೆ ಗಡಿಯನ್ನು ಹಂಚಿಕೊಳ್ಳದ ಕಾರಣದಿಂದ ನಿಧಾನವಾಗಿ ಮತ್ತು ಕ್ರಮೆಣವಾಗಿ ಈ ವಿಷಯ ತನ್ನ ಕಾವು ಕಳೆದುಕೊಳ್ಳಬಹುದು.
ಕೆಲವು ರಾಜ್ಯಗಳ ಗಡಿಗಳ ಮೂಲಕ ಭಾರತದ ಭೂಪ್ರದೇಶಕ್ಕೆ ಒಳನುಸುಳಿಕೊಂಡು ಬಂದು ಯಾವುದೋ ಒಂದು ರಾಜ್ಯದಲ್ಲಿ ನೆಲೆಸಿರಬಹುದಾದ ಜನರು ಇನ್ನೂ ಇದ್ದಾರೆ. ಆದರೆ ಅಂತವರ ಸಂಖ್ಯೆ ಅತ್ಯಂತ ಕಡಿಮೆ ಇರುತ್ತದಲ್ಲದೆ ಸಾಮಾನ್ಯ ಮತದಾರರಿಗೆ ಅದೊಂದು ಸಮಸ್ಯೆಯಾಗಿರುವುದಿಲ್ಲ. ಈ ರಾಜ್ಯಗಳಲ್ಲಿ ಒಂದೊಮ್ಮೆ ಅದು ಚುನಾವಣಾ ವಿಷಯವೇ ಆದರೂ ಬಿಜೆಪಿಗೆ ಅದರ ಲಾಭ ಸೀಮಿತ ಮಟ್ಟದಲ್ಲಿರುತ್ತದೆ. ಯಾಕೆಂದರೆ ಈಗಾಗಲೇ 2014 ಮತ್ತು 2019ರ ಚುನಾವಣೆಗಳಲ್ಲಿ ಬಿಜೆಪಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದೆ.
ಹೆಚ್ಚಿನ ಈ ರಾಜ್ಯಗಳಲ್ಲಿ ಬಿಜೆಪಿ ತನ್ನ ಸೀಟುಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಸಾಧ್ಯತೆಯೂ ಕಡಿಮೆ ಇರುತ್ತದೆ. ರಾಜಾಸ್ತಾನದ 25 ಲೋಕಸಭಾ ಸೀಟುಗಳಲ್ಲಿ ಎಲ್ಲವನ್ನೂ ಬಿಜೆಪಿ ಗಳಿಸಿಕೊಂಡಿದೆ, ಮಧ್ಯಪ್ರದೇಶದ 29ರಲ್ಲಿ 28 ಸೀಟುಗಳನ್ನು, ಚತ್ತೀಸ್‍ಗಡದ 11ರಲ್ಲಿ 9 ಸೀಟುಗಳನ್ನು, ಜಾರ್ಖಂಡ್‍ನ 14ರಲ್ಲಿ 11 ಸೀಟುಗಳನ್ನು, ಉತ್ತರ ಪ್ರದೇಶದ 80ರಲ್ಲಿ 62 ಸೀಟುಗಳನ್ನು ಮತ್ತು ಬಿಹಾರದ 40ರಲ್ಲಿ 39 ಸೀಟುಗಳನ್ನು (JDF(U) ಮತ್ತು LJSNP ಜೊತೆಗೆ ಮೈತ್ರಿಯಲ್ಲಿ) ಬಿಜೆಪಿ ಪಡೆದುಕೊಂಡಿದೆ.
ಹೀಗಾಗಿ ಪೌರತ್ವ ಕಾಯ್ದೆಯ ಕಾರಣದಿಂದ ಬಿಜೆಪಿಯು ಮತ್ತಷ್ಟು ಜನಪ್ರಿಯತೆ ಗಳಿಸಿಕೊಂಡರೂ 2019ರಲ್ಲಿ ತಾನು ಪಡೆದುಕೊಂಡದ್ದಕ್ಕಿಂತಲೂ ಹೆಚ್ಚು ಸ್ಥಾನ ಪಡೆಯುವ ಅವಕಾಶ ಕಡಿಮೆ. ಪಶ್ಚಿಮ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಸಹ ಅದಕ್ಕೆ ಅಂತ ಲಾಭವೇನೂ ಆಗದು. ಇದಕ್ಕೆ ಎರಡು ಕಾರಣಗಳಿವೆ. ಒಂದು ಗುಜರಾತಿನ ಎಲ್ಲಾ 26ಸೀಟುಗಳನ್ನೂ ಮತ್ತು ಮಹಾರಾಷ್ಟ್ರದ 48ರಲ್ಲಿ 41 ಸೀಟುಗಳನ್ನು ಬಿಜೆಪಿ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಪಡೆದುಕೊಂಡಿದೆ.
ಕಾದು ನೋಡಬೇಕಾದ ರಾಜ್ಯಗಳೆಂದರೆ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ. ಹೊಸ ಕಾಯ್ದೆ ಈ ಎರಡೂ ರಾಜ್ಯಗಳಲ್ಲಿ ಹೆಚ್ಚಿನ ಪರಿಣಾಮ ಉಂಟು ಮಾಡುತ್ತದೆ. ಎರಡೂ ರಾಜ್ಯಗಳಲ್ಲಿ ಒಟ್ಟು 55 ಲೋಕಸಭಾ ಸೀಟುಗಳಿವೆ (ಅಸ್ಸಾಂನ 13 ಮತ್ತು ಪಶ್ಚಿಮ ಬಂಗಾಳದ 42) ಮತ್ತು ಈ ಎರಡೂ ರಾಜ್ಯಗಳಲ್ಲಿ ಒಂದಷ್ಟು ಗೆಲುವು ಪಡೆಯಲು ಬಿಜೆಪಿಗೆ ಸಾಧ್ಯವಾಗಿದೆ. 2019ರ ಚುನಾವಣೆಯಲ್ಲಿ ಬಿಜೆಪಿ ಅಸ್ಸಾಂನಲ್ಲಿ 9 ಸೀಟು ಹಾಗೂ 36% ಮತಗಳನ್ನು ಪಡೆಯಿತಲ್ಲದೇ ಪಶ್ಚಿಮ ಬಂಗಾಳದಲ್ಲಿ 18 ಸೀಟುಗಳನ್ನೂ 40% ಮತಗಳನ್ನೂ ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಈ ಎರಡೂ ರಾಜ್ಯಗಳಲ್ಲಿ ತನ್ನ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವ ಸಾಧ್ಯತೆ ಬಿಜೆಪಿಗೆ ಇದೆ.
ಅಸ್ಸೋಂನಲ್ಲಿ ಕಳೆದ ವರ್ಷ ನಡೆಸಿದ ರಾಷ್ಟ್ರೀಯ ಪೌರತ್ವ ನೋಂದಣಿಯು (NRC) ತೀರಾ ವಿವಾದಾತ್ಮಕವಾಗಿತ್ತಲ್ಲದೇ ಅದರ ಪರಿಣಾಮವಾಗಿ ಹೊಸ ಪೌರತ್ವ ಕಾಯ್ದೆ ವಿರುದ್ಧ ಅಸ್ಸೋಂನಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದವು. ಈ ಕಾಯ್ದೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿವರ ಪ್ರತಿಕ್ರಿಯೆಯಂತೂ ಎಲ್ಲರಿಗೂ ತಿಳಿದ ವಿಷಯ. ಅವರು ಕಾಯ್ದೆಗೆ ತಮ್ಮ ವಿರೋಧವನ್ನು ಬಹಿರಂಗವಾಗಿಯೇ ವಿರೋಧಿಸಿದ್ದಾರೆ.
ಈ ಎರಡೂ ರಾಜ್ಯಗಳು ನೆರೆಯ ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತವೆ ಎಂಬುದು ಬಹಳ ಮುಖ್ಯವಾದ ವಿಷಯ. ಈ ಎರಡೂ ರಾಜ್ಯಗಳಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಮರಿದ್ದಾರೆ. ಅವರಲ್ಲಿ ಕೆಲವರು ಅಕ್ರಮ ನಿವಾಸಿಗಳು ಎನ್ನಲಾಗಿದೆ. 2021ರ ಮಧ್ಯಭಾಗದಲ್ಲಿ ಈ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ಪೌರತ್ವ ಕಾಯ್ದೆ ವಿಷಯ ಮುಖ್ಯವಾದ ಚುನಾವಣಾ ವಿಷಯವಾಗಲಿದೆ. ಅದು ಯಾವ ರೀತಿಯ ಫಲಿತಾಂಶ ನೀಡಲಿದೆ ಎಂಬುದು 2024ರ ಮಹಾಸಮರದಲ್ಲಿ ಈ ವಿಷಯ ಎಷ್ಟು ಮುಖ್ಯವಾಗುತ್ತದೆ ಎಂಬುದಕ್ಕೆ ದಿಕ್ಸೂಚಿಯಾಗಲಿದೆ.