ಕಳೆದ ವರ್ಷ ಈ ಸಮಯದಲ್ಲಿ ಬಿಹಾರ ಮತ್ತು ಆಗಸ್ಟ್ನಲ್ಲಿ ಒಡಿಶಾ, ಕೇರಳ, ಮಹಾರಾಷ್ಟ್ರ ಹಾಗು ಕರ್ನಾಟಕ ಪ್ರವಾಹದಿಂದಾಗಿ ಹಾನಿಗೊಳಗಾಗಿದ್ದವು. ಪ್ರಸ್ತುತ ಅಸ್ಸೋಂ ಪ್ರವಾಹದಿಂದಾಗಿ ಅದೇ ರೀತಿ ಸಂಕಷ್ಟಕ್ಕೆ ಸಿಲುಕಿದೆ. ಬ್ರಹ್ಮಪುತ್ರ, ಧನ್ಸಿರಿ, ಜಯ ಭಾರಲಿ, ಕೋವಿಲಿ ಹಾಗು ಬೆಕಿ ನದಿಗಳು ಅಪಾಯದ ಮಟ್ಟ ದಾಟಿ ಹರಿಯುತ್ತಿವೆ.
ರಾಜ್ಯದ 27 ಜಿಲ್ಲೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಮಾಹಿತಿ ಪ್ರಕಾರ, ಭೀಕರ ಪ್ರವಾಹ ಇದುವರೆಗೆ 80 ಜನರನ್ನು ಬಲಿ ತೆಗೆದುಕೊಂಡಿದೆ. ಪ್ರವಾಹವು 430 ಚದರ ಕಿ.ಮೀ ವಿಸ್ತಾರದ ಕಾಜಿರಂಗಾ ಉದ್ಯಾನವನದ ಶೇ. 95 ರಷ್ಟು ಭಾಗವನ್ನು ಆವರಿಸಿಕೊಂಡಿದ್ದು, ಖಡ್ಗಮೃಗ ಸೇರಿದಂತೆ ಅಪರೂಪದ ವಿಶಿಷ್ಟ ವನ್ಯ ಪ್ರಾಣಿಗಳು ಅಪಾಯಕ್ಕೆ ಸಿಲುಕಿವೆ. ಹಲವು ಪ್ರಾಣಿಗಳು ಈಗಾಗಲೇ ಮೃತಪಟ್ಟಿವೆ.
ಆಗಸ್ಟ್ ಮಧ್ಯದ ವೇಳೆ ರಾಜ್ಯದಲ್ಲಿ ಸುಮಾರು 64 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ನಡುವೆ ಭೀಕರ ಪ್ರವಾಹ ಬಂದಿರುವುದು ಸರ್ಕಾರಕ್ಕೆ ಇನ್ನೊಂದು ದೊಡ್ಡ ಸವಾಲಾಗಿದೆ. ಪ್ರವಾಹದಿಂದ ಇದುವರೆಗೆ ಎರಡೂವರೆ ಲಕ್ಷ ಹೆಕ್ಟೇರ್ ಕೃಷಿ ಹಾನಿ ಸಂಭವಿಸಿದೆ. ಇದರ ಜೊತೆಗೆ ಜಪಾನೀಸ್ ಎನ್‌ಸೈಫಾಲಿಟಿಸ್ ಸೊಳ್ಳೆಗಳ ಉತ್ಪತ್ತಿಗೂ ಪ್ರವಾಹ ಕಾರಣವಾಗಿದೆ.
ಸರಿಯಾದ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ದೇಶದಲ್ಲಿ ದಶಕಗಳ ಬಳಿಕ ಶೇ.12 (4 ಕೋಟಿ ಹೆಕ್ಟೇರ್) ಭೂಮಿ ಪ್ರವಾಹದಿಂದ ಹಾನಿಗೊಳಗಾಗಿವೆ. ಶೇ. 52 ನೈಸರ್ಗಿಕ ವಿಕೋಪ ಸಂಭವಿಸಿದೆ. ಹಲವು ರಾಜ್ಯಗಳು ಪ್ರವಾಹ ನಿರ್ವಹಣೆಗಾಗಿ ಕೇಂದ್ರದ ಸಹಾಯ ಯಾಚಿಸಿದೆ. ಕೇಂದ್ರ ಜಲ ಆಯೋಗ ಬಿಡುಗಡೆ ಮಾಡಿರುವ ವರದಿಯ ಪ್ರಕಾರ,1953 ಮತ್ತು 2017 ರ ನಡುವೆ ಸುಮಾರು 1,07,000 ಜನರು ಪ್ರವಾಹದಲ್ಲಿ ಮೃತಪಟ್ಟಿದ್ದಾರೆ. ಸುಮಾರು 3.36 ಲಕ್ಷ ಕೋಟಿ ಹೆಕ್ಟೇರ್ ಕೃಷಿ ಭೂಮಿ ಹಾನಿಗೊಳಗಾಗಿವೆ. ಹವಾಮಾನ ವೈಪರೀತ್ಯದಿಂದ ಮುಖ್ಯವಾಗಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಸರ್ಕಾರ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಇನ್ನೂ ವಿಳಂಬ ಮಾಡಲು ಸಾಧ್ಯವಿಲ್ಲ.
ವಿಶ್ವಬ್ಯಾಂಕಿನ ಅಧ್ಯಯನದ ಪ್ರಕಾರ, 2050 ರ ವೇಳೆಗೆ ಅರ್ಧದಷ್ಟು ಭಾರತೀಯರ ಜೀವನ ಮಟ್ಟ ಶೇ. 50% ರಷ್ಟು ಕಡಿತಗೊಂಡಿದೆ. ಪ್ರವಾಹದಿಂದಾಗಿ ಪ್ರಾಣ ಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಹೆಚ್ಚಿರುವ ಮೊದಲ ಐದು ದೇಶಗಳಲ್ಲಿ ಭಾರತವು ಒಳಗೊಂಡಿದೆ. ಅಲ್ಪಾವಧಿಯಲ್ಲಿ ಭಾರಿ ಮಳೆ, ಅಸಮರ್ಪಕ ಒಳಚರಂಡಿ ವ್ಯವಸ್ಥೆ, ಜಲಾಶಯಗಳ ಅಸಮರ್ಪಕ ನಿರ್ವಹಣೆ ಮತ್ತು ಪ್ರವಾಹವನ್ನು ನಿಯಂತ್ರಿಸಲು ಅಸಮರ್ಪಕ ಕ್ರಮಗಳು ಪ್ರವಾಹಕ್ಕೆ ಮುಖ್ಯ ಕಾರಣ ಎಂದು ಕೇಂದ್ರ ಒಪ್ಪಿಕೊಂಡಿದೆ. 1960 ರ ದಶಕದಲ್ಲಿ ನಿರ್ಮಿಸಲಾದ ಪ್ರವಾಹದ ಬಂಡ್‌ಗಳು 1990 ರ ಹೊತ್ತಿಗೆ ಅವುಗಳ ಪರಿಣಾಮಕಾರಿತ್ವವನ್ನು ಕಳೆದುಕೊಂಡಿವೆ. 2000 ದಿಂದ ಪ್ರತಿ ವರ್ಷ ಪ್ರವಾಹವು ಅಸ್ಸೋಂನ ಭವಿಷ್ಯವನ್ನು ಡೋಲಾಯಮಾನಗೊಳಿಸಿದೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 2004 ರ ಪ್ರವಾಹದಲ್ಲಿ 500 ಜನ ಪ್ರಾಣ ಕಳೆದುಕೊಂಡ ಬಳಿಕ ಕೇಂದ್ರ ಸರ್ಕಾರ ಟಾಸ್ಕ್ ಫೋರ್ಸ್ ನೇಮಿಸಿದೆ. ಆದರೆ, ಅದರ ಕೆಲಸ ಮಾತ್ರ ಶೂನ್ಯವಾಗಿದೆ. ಬ್ರಹ್ಮಪುತ್ರ ನದಿಯಿಂದ ಹೂಳೆತ್ತುವ 40 ಸಾವಿರ ಕೋಟಿ ರೂ.ಗಳ ಯೋಜನೆ ಪ್ರಸ್ತಾಪದ ಹಂತವನ್ನೂ ದಾಟಿಲ್ಲ. ದೇಶದಾದ್ಯಂತ ನೈಸರ್ಗಿಕ ವಿಕೋಪಗಳನ್ನು ಎದುರಿಸಲು 14 ನೇ ಹಣಕಾಸು ಆಯೋಗವು 61,219 ಕೋಟಿ ರೂ ಮೀಸಲಿಟ್ಟಿದೆ. ಹೊಸ ಹಣಕಾಸು ಆಯೋಗ ಏನು ಕ್ರಮ ಕೈಗೊಳ್ಳುತ್ತದೆ ಎಂಬುವುದರ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಪ್ರವಾಹ ತಡೆಯಲು ಖರ್ಚು ಮಾಡುವ ಪ್ರತಿ ಡಾಲರ್ ಪ್ರವಾಹದಿಂದ ಉಂಟಾಗುವ ಎಂಟು ಡಾಲರ್ ನಷ್ಟವನ್ನು ತಡೆಯುತ್ತದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಸಮುದ್ರ ಮಟ್ಟಕ್ಕಿಂತ ಕೆಳಗಿರುವ ನೆದರ್ಲ್ಯಾಂಡ್ಸ್, ಪ್ರವಾಹ ಪೀಡಿತ ಪ್ರದೇಶಗಳಲ್ಲಿ 2/3 ರಷ್ಟು ಆರ್ಥಿಕ ಸಂಪನ್ಮೂಲವನ್ನು ಪ್ರವಾಹ ನಿರ್ವಹಣೆಗೆ ಮೀಸಲಿಡಲಾಗಿದೆ ಮತ್ತು ಇಲ್ಲಿ ಪ್ರವಾಹ ತಡೆಯಲು ಬಲವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾರತವು ಇದರಿಂದ ಪಾಠ ಕಲಿಯಬೇಕು ಮತ್ತು ಪ್ರವಾಹ ನಿಯಂತ್ರಿಸಬೇಕು.