ನವದೆಹಲಿ/ಬೀಜಿಂಗ್ : ಗಡಿ ನಿಲುವು ಬಗೆಹರಿಸಲು ಭಾರತ ಜೊತೆಗಿನ ಇತ್ತೀಚಿನ ಮಿಲಿಟರಿ ಮಟ್ಟದ ಮಾತುಕತೆಯು ಉಭಯ ದೇಶಗಳ ನಾಯಕತ್ವದ ನಡುವೆ ತಲುಪಿದ ಒಮ್ಮತವನ್ನು ಕಾರ್ಯಗತಗೊಳಿಸುವ ಅಗತ್ಯವಿದೆ. ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಉಲ್ಬಣಗೊಳ್ಳದಂತೆ ನೋಡಿಕೊಳ್ಳಬೇಕು ಎಂದು ಚೀನಾ ಸೋಮವಾರ ಹೇಳಿದೆ.
ಇದರ ನಡುವೆ ಪೂರ್ವ ಲಡಾಖ್ನ ಗಡಿಯಲ್ಲಿ ಚೀನಾ ಸೇನೆಯ ಹೆಲಿಕಾಪ್ಟರ್ ಹಾರಾಟ ನಡೆಸಿದೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ಡ್ರ್ಯಾಗನ್ ಸೇನೆಗೆ ಸೇರಿದ ಎಂಐ-17 ಹೆಲಿಕಾಪ್ಟರ್ ಗಸ್ತು ತಿರುಗುತ್ತಿದ್ದು, ಎಲ್ಎಸಿಯ ಈ ಕಡೆ ಭಾರತೀಯ ಸೇನೆಯು ಅದರ ವಟುವಟಿಕೆಗಳ ಮೇಲೆ ನಿಗಾ ಇರಿಸಿದೆ. ಇದರ ನಡುವೆ ಚೀನಾದ ವಿದೇಶಾಂಗ ಸಚಿವಾಲಯ, ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಉಲ್ಬಣಗೊಳ್ಳದಂತೆ ನೋಡಿಕೊಳ್ಳಬೇಕು ಎಂದು ಉಚ್ಚರಿಸುತ್ತಿದೆ.
ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಸಾರವಾಗಿ ಪ್ರಸ್ತುತ ಗಡಿ ನಿಲುವನ್ನು ಶಾಂತಿಯುತವಾಗಿ ಪರಿಹರಿಸಲು ಭಾರತ ಮತ್ತು ಚೀನಾ ನಡುವೆ ಮ್ಯಾರಥಾನ್ ಮಿಲಿಟರಿ ಮಾತುಕತೆ ನಡೆದ ಎರಡು ದಿನಗಳ ನಂತರ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ಅವರ ಹೇಳಿಕೆ ಹೊರ ಬಿದ್ದಿದೆ. ಜೂನ್ 6ರಂದು ಮಧ್ಯಾಹ್ನ ಚೂಸುಲ್ ಮೊಲ್ಡೊ ಪ್ರದೇಶದಲ್ಲಿ ಚೀನಾ ಮತ್ತು ಭಾರತದ ಕಮಾಂಡರ್‌ಗಳ ನಡುವೆ ಸಭೆ ನಡೆಸಲಾಗಿದೆ. ಎರಡೂ ಕಡೆಯವರು ಸಮಾಲೋಚನೆ ನಡೆಸಿದ್ದಾರೆ ಎಂದು ಚುನೈಂಗ್ ಹೇಳಿದ್ದಾರೆ.
ಇತ್ತೀಚೆಗೆ ಎರಡೂ ಕಡೆಯ ರಾಜತಾಂತ್ರಿಕ ಮತ್ತು ಮಿಲಿಟರಿ ವಾಹಿನಿಗಳು ಗಡಿಯ ಪರಿಸ್ಥಿತಿಯ ಬಗ್ಗೆ ನಿಕಟ ಸಂವಹನ ನಡೆಸುತ್ತಿವೆ. ಎರಡು ನಾಯಕರು ಒಮ್ಮತದ ಅನುಷ್ಠಾನವನ್ನು ಜಾರಿಗೆ ತರಬೇಕು. ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಉಲ್ಬಣಗೊಳ್ಳದಂತೆ ನೋಡಿಕೊಳ್ಳಬೇಕು ಎಂದು ಹುವಾ ಹೇಳಿದರು. ಎರಡು ಅನೌಪಚಾರಿಕ ಶೃಂಗಸಭೆಗಳ ನಂತರ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನಗಳನ್ನು ಉಲ್ಲೇಖಿಸಿದ ಹುವಾ, ಗಡಿಯುದ್ಧಕ್ಕೂ ಶಾಂತಿ ಕಾಪಾಡಿಕೊಳ್ಳಲು ಹೆಚ್ಚಿನ ವಿಶ್ವಾಸ ಬೆಳೆಸುವಂತಹ ಕ್ರಮಗಳನ್ನು ತೆಗೆದುಕೊಳ್ಳುವಂತೆ ಉಭಯ ದೇಶಗಳ ಮಿಲಿಟರಿಗಳನ್ನು ಕೇಳುತ್ತೇನೆ ಎಂದರು.
ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳಲು ಮತ್ತು ಉತ್ತಮ ವಾತಾವರಣ ಸೃಷ್ಟಿಸಲು ಎರಡೂ ಕಡೆಯವರು ಕೆಲಸ ಮಾಡುತ್ತಾರೆ. ಒಟ್ಟಾರೆ ಪರಿಸ್ಥಿತಿ ಸ್ಥಿರ ಮತ್ತು ನಿಯಂತ್ರಿಸಬಲ್ಲದು. ಸಂಬಂಧಿತ ಸಮಸ್ಯೆಗಳನ್ನು ಸರಿಯಾಗಿ ಪರಿಹರಿಸಲು ಸಮಾಲೋಚನೆಯಲ್ಲಿ ತೊಡಗಿಸಿಕೊಳ್ಳಲು ಎರಡೂ ಕಡೆಯವರು ಸಿದ್ಧರಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.