79ನೇ ಇಳಿವಯಸ್ಸಿನಲ್ಲೂ ಸುರಿಯುವ ಮಳೆಯೂ ಲೆಕ್ಕಿಸದೇ ಎನ್ಸಿಪಿ ಮುಖಂಡ ಶರದ್ ಪವಾರ್ ಚುನಾವಣಾ ಪ್ರಚಾರ ನಡೆಸಿದ್ರು. ಬಿಜೆಪಿ ಎಂಬ ಸುನಾಮಿ ಎದುರು ಅವರ ಆಟ ನಡೆಯುವುದಿಲ್ಲ ಎಂದವರಿಗೆ ಇದೀಗ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ತಿರುಗೇಟು ನೀಡಿ ಫೀನಿಕ್ಸ್ನಂತೆ ಎದ್ದು ಬಂದಿದ್ದಾರೆ.
ಸತಾರಾದಲ್ಲಿ ಅಭ್ಯರ್ಥಿ ಪರ ಚುನಾವಣೆ ಭಾಷಣ ಮಾಡಿದ್ದ 79 ವರ್ಷದ ಶರದ್ ಪವಾರ್, ಸುಮಾರು ನಲವತ್ತು ನಿಮಿಷ ಭಾಷಣ ಮಾಡಿದರು. ಪಕ್ಷದ ಮುಖಂಡರು, ಕೊಡೆ ನೀಡಲು ಬಂದರೂ ಅದನ್ನು ನಿರಾಕರಿಸಿದ್ದ ಎನ್ಸಿಪಿ ಮುಖಂಡ ತಾವು ಪಕ್ಷಕ್ಕಾಗಿ ಪ್ರಚಾರ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿರುವ ಜತೆಗೆ ಟ್ರೋಲ್ಗೂ ತುತ್ತಾಗಿತ್ತು.
ಇದೀಗ ಫಲಿತಾಂಶ ಹೊರಬಿದ್ದಿದೆ. 2014ರ ಚುನಾವಣೆಗೆ ಹೋಲಿಕೆ ಮಾಡಿದ್ರೆ ಈ ಸಲ ಎನ್ಸಿಪಿ 13 ಕ್ಷೇತ್ರಗಳಲ್ಲಿ ಹೆಚ್ಚುವರಿ ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. 2014ರಲ್ಲಿ ಕೇವಲ 41 ಕ್ಷೇತ್ರಗಳಲ್ಲಿ ಗೆದ್ದಿದ್ದ ಶರದ್ ಪವಾರ್ ಪಕ್ಷ ಈ ಸಲ 54 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ.
1999ರಲ್ಲಿ ಎನ್ಸಿಪಿ ಪಕ್ಷ ಹುಟ್ಟುಹಾಕಿದ್ದ ಶರದ್ ಪವಾರ್ ಹೊಸ ಚಿಹ್ನೆಯೊಂದಿಗೆ ಜನರ ಮುಂದೆ ನಿಂತಿದ್ದರು. 2004ರಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಚುನಾವಣೆ ಕಣಕ್ಕಿಳಿದು 71 ಸ್ಥಾನಗಳಲ್ಲಿ ಜಯ ಗಳಿಸಿದ್ದರೆ, ಕಾಂಗ್ರೆಸ್ 69 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಆ ವೇಳೆ ಕಾಂಗ್ರೆಸ್ ಪಕ್ಷದ ವಿಲಾಸ್ ರಾವ್ ದೇಶ್ ಮುಖ್ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು.
ರೈತ ಕುಟುಂಬದಿಂದಲೇ ಬಂದಿರುವ ಶರದ್ ಪವಾರ್, ಗ್ರಾಮೀಣ ಮಹಾರಾಷ್ಟ್ರದಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ. ಈ ಸಲದ ಚುನಾವಣೆಯಲ್ಲೂ ಅವರು ಇದೇ ಅಂಶಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದರು. ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುವ ಪವಾರ್, ಯಾವುದೇ ರೀತಿಯ ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡ ಜನರ ಮುಂದೆ ನಿಲ್ಲುವುದಿಲ್ಲ. ಈ ಸಲದ ಚುನಾವಣೆಯಲ್ಲಿ ಅದೇ ಅವರ ಮಾತಿನ ಚಾಟಿ ಸಹ ಆಗಿತ್ತು.
ಅಪಾರ ಪ್ರಮಾಣದಲ್ಲಿ ಭೂಮಿ ಹೊಂದಿದ್ದಾರೆ ಎಂದು ಹಾಗೂ ಅಲ್ಲಿನ ಸಹಕಾರಿ ಬ್ಯಾಂಕ್ನಲ್ಲಿನ ಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಈ ವೇಳೆ ಇಡಿ ದಾಳಿ ನಡೆಸುವ ಮುನ್ನವೇ ತಾವೇ ಖುದ್ದಾಗಿ, ಏನು ವಿಚಾರಣೆ ಮಾಡಬೇಕೋ ಮಾಡಿ ಎಂದು ಇಡಿ ಕಚೇರಿ ಮುಂದೆ ಮಳೆಯಲ್ಲೇ ಕೂತಿದ್ದರು. ವಿಚಾರಣೆ ನಡೆಸಿದರೆ, ಚುನಾವಣೆಯ ವೇಳೆ ಬೀರಬಹುದಾದ ಪರಿಣಾಮದ ಸೂಕ್ಷ್ಮತೆಯನ್ನು ಅರಿತ ಇಡಿ, 'ಬೇಕಿದ್ದಾಗ ಕರೆಸುತ್ತೇವೆ' ಎಂದು ಶರದ್ ಪವಾರ್ ಅವರನ್ನು ವಾಪಸ್ ಕಳುಹಿಸಿತ್ತು. ಇದಾದ ಬಳಿಕ ಶರದ್ ಪವಾರ್ ಪ್ರಚಾರದಲ್ಲಿ ಭಾಗಿಯಾಗಿದ್ರು.
ಇವರ ಭಾಷಣದ ಚಾಣಾಕ್ಷ್ಯತೆ ಎಷ್ಟಿತ್ತು ಎಂದರೆ ಮಹಾರಾಷ್ಟ್ರ ದೇವೇಂದ್ರ ಫಡ್ನವಿಸ್ ಸರ್ಕಾದಲ್ಲಿ ಪ್ರಬಲರಾಗಿದ್ದವರ ವಿರುದ್ಧವೇ ತಮ್ಮ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಿದ್ದಾರೆ. ಪ್ರಮುಖವಾಗಿ ಅಜಿತ್ ಪವಾರ್,ಜಯಂತ್ ಪಟೇಲ್ ಹಾಗೂ ಪಂಕಜಾ ಮುಂಡೆ ವಿರುದ್ಧ ಗೆದ್ದ ಧನಂಜಯ್ ಮುಂಡೆ ಇದಕ್ಕೆ ಉದಾಹರಣೆಯಾಗಿದೆ.
ಸಾಕಷ್ಟು ವಿರೋಧದ ನಡುವೆ ಸಹ ಶರದ್ ಪವಾರ್ ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಆ ವೇಳೆ ಶರದ್ ಪವಾರ್ ಹಾಡಿ ಹೊಗಳಿದ್ದ ನರೇಂದ್ರ ಮೋದಿ ಅವರಿಗೆ ಅವರೇ ಸಾಟಿ ಎಂದು ಹೇಳಿದ್ದರು
ಈಗಾಗಲೇ ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆ ತಾವು ಸರ್ಕಾರ ರಚನೆ ಮಾಡುವುದಿಲ್ಲ ಎಂದು ಹೇಳಿರುವ ಶರದ್ ಪವಾರ್, ತಾವು ಅಧಿಕಾರಕ್ಕಾಗಿ ಹಪಹಪಿಸುವುದಿಲ್ಲ ಎಂಬುದು ಇದರಿಂದ ಸಾಬೀತು ಆಗಿದೆ. ಜತೆಗೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ಕಾರಣ ಕಾರ್ಯಕರ್ತರಿಗೆ ಮೋಸ ಮಾಡಲು ಮನಸ್ಸು ಒಪ್ಪಿಕೊಳ್ಳುತ್ತಿಲ್ಲ ಎಂಬುದು ಗೊತ್ತಾಗುತ್ತದೆ.
ಶಿವಸೇನೆಯ ಬೆಂಬಲಿಸುವ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ಅವರಿಗೆ ಮಾತ್ರ ಬೆಂಬಲಿಸುತ್ತೇವೆ. ಇದು ನಮ್ಮ ದೃಢ ನಿರ್ಧಾರವಾಗಿದೆ ಎಂದಿರುವ ಶರದ್ ಪವಾರ್ ಮಾತು ನಿಜಕ್ಕೂ ಮೆಚ್ಚುವಂತಹದ್ದು ಎಂದರೆ ಸುಳ್ಳಾಗದು.