ಮುಂಬೈ: 81 ಕ್ಷೇತ್ರಗಳ ಜಾರ್ಖಂಡ್ ವಿಧಾನಸಭಾ ಫಲಿತಾಂಶ ಇದೀಗ ಹೊರಬೀಳುತ್ತಿದ್ದ ರಘುಬರ್ ದಾಸ್ ನೇತೃತ್ವದ ಆಡಳಿತ ಪಕ್ಷ ಬಿಜೆಪಿ ಮುಖಭಂಗ ಅನುಭವಿಸಿದ್ದು, ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್, ಜೆಎಂಎಂ ಹಾಗೂ ಆರ್ಜೆಡಿ ಸರ್ಕಾರ ರಚನೆ ಮಾಡುವಷ್ಟು ಸಂಖ್ಯಾ ಬಲ ಪಡೆದುಕೊಂಡು ಜಯದ ನಗೆ ಬೀರಿವೆ.
ಈ ನಡುವೆ,ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಾರ್ಖಂಡ್ ಫಲಿತಾಂಶ ಜನರು ಬಿಜೆಪಿ ಬಿಟ್ಟು ಬೇರೆ ಪಕ್ಷಗಳತ್ತ ಒಲವು ತೋರುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಬಣ್ಣಿಸಿದ್ದಾರೆ. ಈಗಾಗಲೇ ಬಿಜೆಪಿ ರಾಜಸ್ಥಾನ, ಛತ್ತೀಸ್ಗಢ, ಮಹಾರಾಷ್ಟ್ರದಲ್ಲಿ ಸೋಲು ಅನುಭವಿಸಿದ್ದು, ಇದೀಗ ಜಾರ್ಖಂಡ್ನಲ್ಲೂ ಅಧಿಕಾರದಿಂದ ದೂರ ಉಳಿಯುವಂತಹ ಅನಿವಾರ್ಯತೆ ಎದುರಾಗಿದೆ.
81 ಕ್ಷೇತ್ರಗಳ ಪೈಕಿ ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಹಾಗೂ ಆರ್ಜೆಡಿ ಸೇರಿ 45 ಕ್ಷೇತ್ರಗಳಲ್ಲಿ ಈಗಾಗಲೇ ಮುನ್ನಡೆ ಪಡೆದುಕೊಂಡಿದ್ದು, ಬಿಜೆಪಿ 25 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡು ಸೋಲು ಒಪ್ಪಿಕೊಂಡಿದೆ.