ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಅವರ ಅಸಹಜ ಸಾವಿನ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಮಾದಕವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ) ತಂಡವು ರಿಯಾ ಚಕ್ರವರ್ತಿಯ ಸಹೋದರ ಶೋವಿಕ್ ಚಕ್ರವರ್ತಿ ಅವರ ಮನೆ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಆರಂಭಿಸಿದೆ.
ಈ ಮಧ್ಯೆ, ಸುಶಾಂತ್ ಸಿಂಗ್ ರಜಪೂತ್ ಅವರ ಆಪ್ತ ಸಹಾಯಕ ಸ್ಯಾಮ್ಯುಯೆಲ್ ಮಿರಾಂಡಾ ಅವರನ್ನು ಮುಂಬೈನ ಮನೆಯಿಂದ ಎನ್‌ಸಿಬಿ ತಂಡ ವಶಕ್ಕೆ ಪಡೆದಿದೆ. ಮೂಲಗಳ ಪ್ರಕಾರ, ಸ್ಯಾಮ್ಯುಯೆಲ್‌ನನ್ನು ಬಂಧಿಸಲು ಎನ್‌ಸಿಬಿ ಬಳಿ ಪುರಾವೆಗಳಿವೆ ಎಂದು ಹೇಳಲಾಗ್ತಿದೆ.
1985ರ ಪಿಎನ್ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಸ್ಯಾಮ್ಯುಯೆಲ್ ಮಿರಾಂಡಾನನ್ನು ಮಾದಕವಸ್ತು ನಿಯಂತ್ರಣ ಸಂಸ್ಥೆ ವಶಕ್ಕೆ ಪಡೆದಿದೆ. ಶೋವಿಕ್ ಚಕ್ರವರ್ತಿ ಮತ್ತು ಸ್ಯಾಮ್ಯುಯೆಲ್ ಮಿರಾಂಡಾ ಅವರ ಮನೆಯಲ್ಲಿ ಶೋಧ ಕಾರ್ಯ ಮುಂದುವರೆದಿದ್ದು, ಇಬ್ಬರನ್ನೂ ವಿಚಾರಣೆಗಾಗಿ ಪಶಕ್ಕೆ ಪಡೆದಿದೆ.
ಈ ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈದ್ ಎಂಬಾತನನ್ನು ಎನ್‌ಸಿಬಿ ಬಂಧಿಸಿತ್ತು. ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಸೆಪ್ಟೆಂಬರ್ 9 ರವರೆಗೆ ಎನ್‌ಸಿಬಿ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿ ಜೈದ್‌ಗೆ ಶೋವಿಕ್ ಚಕ್ರವರ್ತಿ ಮತ್ತು ರಿಯಾ ಚಕ್ರವರ್ತಿ ಅವರೊಂದಿಗೆ ಸಂಬಂಧವಿದೆಯೇ ಎಂದು ತನಿಖೆ ನಡೆಸುತ್ತಿದೆ.
ಈ ಬಗ್ಗೆ ಮಾತನಾಡಿರುವ ಎನ್‌ಸಿಬಿ ಅಧಿಕಾರಿ ಕೆ.ಪಿ.ಎಸ್. ಮಲ್ಹೋತ್ರಾ, ಇದು ಕೇವಲ ಕಾರ್ಯವಿಧಾನದ ವಿಷಯವಾಗಿದೆ. ಅದನ್ನು ನಾವು ಫಾಲೋ ಮಾಡುತ್ತಿದ್ದೇವೆ. ಎನ್‌ಡಿಪಿಎಸ್ ಕಾಯ್ದೆಯಡಿ ಶೋಯಿಕ್ ಚಕ್ರವರ್ತಿ ಮತ್ತು ಸ್ಯಾಮ್ಯುಯೆಲ್ ಮಿರಾಂಡಾ ಅವರ ನಿವಾಸಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದಿದ್ದಾರೆ.