ಮುಂಬೈ: ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಚಲನಚಿತ್ರ ನಿರ್ಮಾಪಕನಾಗಿರುವ ಫಿರೋಜ್ ನಾಡಿಯಾದ್ವಾಲಾಗೆ ಸಮನ್ಸ್ ಜಾರಿ ಮಾಡಿರುವ ಎನ್‌ಸಿಬಿ ನಾಡಿಯಾದ್ವಾಲಾ ಪತ್ನಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದೆ.
‘ಫಿರ್ ಹೇರಾ ಫೆರಿ’, ‘ಆವರ ಪಾಗಲ್ ದಿವಾನಾ’ ಮತ್ತು ‘ವೆಲ್ಕಂ’ ಸಿನಿಮಾಗಳನ್ನು ನಿರ್ಮಿಸಿರುವ ಫಿರೋಜ್ ನಾಡಿಯಾದ್ವಾಲಾ ಅವರ ನಿವಾಸದಲ್ಲೂ ಕೂಡಾ ಶೋಧ ನಡೆಸಲಾಗಿದ್ದು, ಹಲವು ಮಾಹಿತಿಯನ್ನು ಕಲೆಹಾಕಲಾಗಿದೆ.
ಫಿರೋಜ್ ನಾಡಿಯಾದ್ವಾಲಾಗೆ ಸಮನ್ಸ್ ಹಾಗೂ ಅವರ ಪತ್ನಿಯನ್ನು ಬಂಧಿಸಲಾಗಿದೆ ಎಂದು ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಸ್ಪಷ್ಟನೆ ನೀಡಿದ್ದಾರೆ.
ಇದಕ್ಕೂ ಮೊದಲು ಎನ್‌ಸಿಬಿ ಮಲಾಡ್, ಅಂಧೇರಿ, ಲೋಖಂಡ್ವಾಲಾ, ಖಾರ್ಘರ್ ಮತ್ತು ಕೋಪರ್ ಖೈರೇನ್‌ನ ಐದು ಸ್ಥಳಗಳಲ್ಲಿ ದಾಳಿ ನಡೆಸಿ, ಶೋಧ ನಡೆಸಿತ್ತು. ನವೆಂಬರ್ 7ರ ರಾತ್ರಿ ವಿಚಾರಣೆ ನಡೆಸಿದ ನಂತರ ಆಕೆಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮನೆಗಳಲ್ಲಿ ಶೋಧ ನಡೆಸುವ ವೇಳೆ ಆರು ಕೆ.ಜಿ ಗಾಂಜಾ, ಚರಸ್ ಹಾಗೂ ಸ್ವಲ್ಪ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಸಿಬಿ ಮಾಹಿತಿ ನೀಡಿದೆ.