ನವದೆಹಲಿ: ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಇ- ಗ್ರಾಮ್ ಸ್ವರಾಜ್ ಮತ್ತು ಸ್ವಾಮಿತ್ವ ಯೋಜನೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.
'ಇ-ಗ್ರಾಮಸ್ವರಾಜ್ ಪೋರ್ಟಲ್' ತಮ್ಮ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ (ಜಿಪಿಡಿಪಿ) ಯನ್ನು ಒದಗಿಸಲು ಮತ್ತು ಕಾರ್ಯಗತಗೊಳಿಸಲು ಗ್ರಾಮ ಪಂಚಾಯಿತಿಗಳೊಂದಿಗೆ ಕೊಂಡಿಯಾಗಿ ನಿರ್ವಹಿಸಲಿದೆ. ಸ್ವಾಮಿತ್ವಾ ಯೋಜನೆ ಗ್ರಾಮೀಣ ಭಾರತಕ್ಕೆ ಸಮಗ್ರ ಆಸ್ತಿ ಮೌಲ್ಯಮಾಪನ ಪರಿಹಾರವನ್ನು ತಲುಪಿಸುವ ಗುರಿಯನ್ನು ಹೊಂದಿದೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಎಂದರೇನು?
ಏಪ್ರಿಲ್ 24, 1993 ರಲ್ಲಿ ಸಂವಿಧಾನದ 73 ನೇ ತಿದ್ದುಪಡಿಯ ಮೂಲಕ ‘ಪಂಚಾಯತ್ ರಾಜ್’ ವ್ಯವಸ್ಥೆಯನ್ನು ಸಾಂಸ್ಥೀಕರಣಗೊಳಿಸುವುದರೊಂದಿಗೆ ತಳಮಟ್ಟಕ್ಕೆ ಅಧಿಕಾರದ ವಿಕೇಂದ್ರೀಕರಣದ ಇತಿಹಾಸದಲ್ಲಿ ಒಂದು ನಿರ್ಣಾಯಕ ಕ್ಷಣವಾಗಿದೆ. ಆದ್ದರಿಂದ, ಒಂದು ವರ್ಷದ ನಂತರ ಪಂಚಾಯತ್ ರಾಜ್ ಸಚಿವಾಲಯವು ಏಪ್ರಿಲ್ 24 ಅನ್ನು ರಾಷ್ಟ್ರೀಯ ಪಂಚಾಯತ್ ರಾಜ್ ದಿನ (ಎನ್‌ಪಿಆರ್‌ಡಿ) ಎಂದು ಸ್ಮರಿಸುತ್ತದೆ. ಮೊದಲ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು 2010 ರಲ್ಲಿ ಆಚರಿಸಲಾಯಿತು
1957 ರಲ್ಲಿ, ಭಾರತದಲ್ಲಿ ಪಂಚಾಯತ್ ರಾಜ್ನ ವಿಕಾಸವನ್ನು ಕೇಂದ್ರೀಕರಿಸಿ ಸಮಿತಿಯನ್ನು ರಚಿಸಲಾಯಿತು. ಬಲವಂತರಾಯ್ ಮೆಹ್ತಾ ಅಧ್ಯಕ್ಷತೆಯ ಸಮಿತಿ ವಿಕೇಂದ್ರೀಕೃತ ಮೂರು ಹಂತದ ಪಂಚಾಯತಿ ರಾಜ್ ವ್ಯವಸ್ಥೆಯನ್ನು ಶಿಫಾರಸು ಮಾಡಿತು
- ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿ
- ಬ್ಲಾಕ್ ಮಟ್ಟದಲ್ಲಿ ಪಂಚಾಯತ್ ಸಮಿತಿ
- ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ
ಪಂಚಾಯತ್ ರಾಜ್ ಪದ್ಧತಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ರಾಜಸ್ಥಾನ, ಮತ್ತು ಈ ಯೋಜನೆಯನ್ನು ದಿವಂಗತ ಪ್ರಧಾನಿ ಜವಾಹರಲಾಲ್ ನೆಹರು ಅವರು ಅಕ್ಟೋಬರ್ 2, 1959 ರಂದು ರಾಜ್ಯದ ನಾಗೌರ್ ಜಿಲ್ಲೆಯಲ್ಲಿ ಉದ್ಘಾಟಿಸಿದರು. ಆಂಧ್ರಪ್ರದೇಶವು ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದ ಎರಡನೇ ರಾಜ್ಯವಾಗಿದೆ.
ದೇಶದಲ್ಲಿ 2.54 ಲಕ್ಷ ಪಂಚಾಯಿತಿಗಳಿದ್ದು, ಅದರಲ್ಲಿ 2.47 ಲಕ್ಷ ಗ್ರಾಮ ಪಂಚಾಯಿತಿಗಳು, 6,283 ಬ್ಲಾಕ್ ಪಂಚಾಯಿತಿಗಳು ಮತ್ತು 595 ಜಿಲ್ಲಾ ಪಂಚಾಯಿತಿಗಳು. ಒಟ್ಟು 29 ಲಕ್ಷಕ್ಕೂ ಹೆಚ್ಚು ಪಂಚಾಯತ್ ಪ್ರತಿನಿಧಿಗಳಿದ್ದಾರೆ.
ಗ್ರಾಮ ಸ್ವರಾಜ್: ಪಂಚಾಯತ್ ರಾಜ್ ವ್ಯವಸ್ಥೆಯ ಹಿಂದಿನ ಆಲೋಚನೆ
ಮಹಾತ್ಮ ಗಾಂಧಿ ಅವರು ಪಂಚಾಯತ್ ರಾಜ್ ಅನ್ನು ಭಾರತದ ರಾಜಕೀಯ ವ್ಯವಸ್ಥೆಯ ಅಡಿಪಾಯವೆಂದು ಪ್ರತಿಪಾದಿಸಿದ್ರು. ವಿಕೇಂದ್ರೀಕೃತ ಸರ್ಕಾರದ ರೂಪವನ್ನು ಅವರು ಕಲ್ಪಿಸಿಕೊಂಡರು. ಅಲ್ಲಿ ಪ್ರತಿ ಹಳ್ಳಿಯು ತನ್ನ ವ್ಯವಹಾರಗಳಿಗೆ ಜವಾಬ್ದಾರವಾಗಿರುತ್ತದೆ ಅದೇ ಗ್ರಾಮ ಸ್ವ-ಆಡಳಿತ ಎಂಬುದು ಅವರ ಆಲೋಚನೆಯಾಗಿತ್ತು.
ನಮ್ಮ ದೇಶದ ಹಳ್ಳಿಗಳು ನಾಶವಾದರೆ ಭಾರತ ನಾಶವಾಗಲಿದೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಹೀಗಾಗಿ ಹಳ್ಳಿಗಳು ಭಾರತದ ಬೆನ್ನೆಲುಬುಗಳಾಗಿ ರೂಪುಗೊಳ್ಳುವ ಕನಸು ಕಂಡರು.