ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದ ಕಾರಣ ಕಳೆದ ಕೆಲ ದಿನಗಳ ಕಾಲ ದೆಹಲಿ ಹೊತ್ತಿ ಉರಿದಿದ್ದು, ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಈ ವೇಳೆ ಕೆಲ ಉದ್ರಿಕ್ತರು ಶಿವನ ದೇವಸ್ಥಾನದ ಮೇಲೆ ದಾಳಿ ನಡೆಸಲು ಮುಂದಾದಾಗ ಮುಸ್ಲಿಮರು ಅದರ ರಕ್ಷಣೆ ಮಾಡಿರುವ ಘಟನೆ ನಡೆದಿದ್ದಾಗಿ ತಿಳಿದು ಬಂದಿದೆ. ಫೆ. 25ರಂದು ರಾತ್ರಿ ಇಂದಿರಾ ವಿಹಾರ್ ಪ್ರದೇಶದಲ್ಲಿನ ಶಿವನ ದೇವಸ್ಥಾನದ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿ ಧ್ವಂಸ ಮಾಡಲು ಮುಂದಾಗಿದೆ. ಈ ವೇಳೆ ಶಕೀಲ್ ಅಹ್ಮದ್ ಹಾಗೂ ಇತರ ಮುಸ್ಲಿಂ ವ್ಯಕ್ತಿಗಳ ಸಹಾಯದಿಂದ ದೇವಾಲಯ ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶಕೀಲ್, ದುಷ್ಕರ್ಮಿಗಳು ಶಿವನ ದೇವಸ್ಥಾನ ಹಾಗೂ ಮಸೀದಿ ಧ್ವಂಸ ಮಾಡಲು ಬರುತ್ತಿದ್ದಂತೆ ನಾವು ಅವರನ್ನು ಹಿಮ್ಮೆಟ್ಟಿಸಿ, ದೇವಾಲಯ ಹಾಗೂ ಮಸೀದಿ ಒಳಗೆ ಹೋಗದಂತೆ ತಡೆ ಹಾಕಿದೆವು. ಇವರೆಲ್ಲರೂ ಮೂಲತಃ ದೆಹಲಿಯವರು ಎಂದು ನನಗೆ ಅನಿಸಲಿಲ್ಲ ಎಂದಿದ್ದಾರೆ. ಹೊರಗಡೆಯಿಂದ ಬಂದು ಕೃತ್ಯವೆಸಗಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ. ದೆಹಲಿ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 42 ಜನರು ಸಾವನ್ನಪ್ಪಿದ್ದು, ಹಲವರು ಮನೆ ಕಳೆದುಕೊಂಡಿದ್ದಾರೆ.