ಭುವನೇಶ್ವರ್: ಭಾರತದ ಮುಸ್ಲಿಮರು ಅತ್ಯಂತ 'ಸಂತುಷ್ಟಿಗಳು' ಎಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್, 'ಹಿಂದೂ ಸಂಸ್ಕೃತಿ'ಯಿಂದಾಗಿ ಇತರ ಧರ್ಮದ ಜನರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಶನಿವಾರ ನಡೆದ ಬುದ್ಧಿಜೀವಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ಪ್ರಪಂಚದಲ್ಲೇ ಭಾರತದಲ್ಲಿನ ಮುಸಲ್ಮಾನರು ಸಂತೋಷದಾಯಕರಾಗಿರುತ್ತಾರೆ. ನಾವು ಹಿಂದುಗಳು ಎಂಬುದೇ ಅವರ ಸಂತೋಷದ ಜೀವನಕ್ಕೆ ಕಾರಣ. ಪ್ರಪಂಚದ ಒಂದು ದೇಶ, ಅದು ಗೊಂದಲಕ್ಕೊಳಗಾದಾಗ ಮತ್ತು ಸರಿಯಾದ ಮಾರ್ಗದಿಂದ ಬೇರೆಡೆಗೆ ತಿರುಗಿದಾಗ, ಸತ್ಯವನ್ನು ಹುಡುಕಿಕೊಂಡು ಭಾರತಕ್ಕೆ ಬಂದಿತು. ಯಹೂದಿಗಳನ್ನು ಓಡಿಸಿದಾಗ, ಅವರಿಗೆ ಆಶ್ರಯ ನೀಡಿದ ಏಕೈಕ ದೇಶ ಎಂದರೆ ಭಾರತ. 'ಹಿಂದೂ' ಎಂದರೆ ಅದು ಕೇವಲ ಒಂದು ಭಾಷೆ, ಪ್ರಾಂತ್ಯ ಅಥವಾ ದೇಶದ ಹೆಸರಲ್ಲ, ಅದು ಒಂದು ಸಂಸ್ಕೃತಿ. ಇದು ಭಾರತದಲ್ಲಿ ವಾಸಿಸುವ ಎಲ್ಲ ಜನರ ಪರಂಪರೆಯಾಗಿದೆ ಎಂದು ಹೇಳಿದರು.
ಭಾರತದ ಕುರಿತ ಆರ್‌ಎಸ್‌ಎಸ್ ದೃಷ್ಟಿಕೋನವು 'ಸ್ಪಷ್ಟ, ಉತ್ತಮ ಚಿಂತನೆ ಮತ್ತು ದೃಢ'ವಾದದ್ದು, ಭಾರತ ಅಂದರೆ ಹಿಂದೂಸ್ತಾನ, ಹಿಂದೂ ರಾಷ್ಟ್ರ ಎಂದು ಮೊನ್ನೆಯಷ್ಟೇ ಹೇಳಿಕೆ ನೀಡಿದ್ದ ಬೆನ್ನಲ್ಲೇ, ಈಗ ಅದೇ ರೀತಿಯಾಗಿ ಭಾರತದಲ್ಲಿನ ಮುಸಲ್ಮಾನರು ಸಂತುಷ್ಟಿಗಳು ಎಂಬ ಮತ್ತೊಂದು ಹೇಳಿಕೆಯನ್ನ ಆರ್‌ಎಸ್‌ಎಸ್ ಮುಖ್ಯಸ್ಥ ನೀಡಿದ್ದಾರೆ.