ನಲ್ಬಾರಿ (ಅಸ್ಸೋಂ): ಭಾರತದಲ್ಲಿ ಕೋಮು ವಿಭಜನೆ ವಿಸ್ತಾರಗೊಳ್ಳುತ್ತಿರುವ ಸಮಯದಲ್ಲಿ, ಅಸ್ಸೋಂನ ದೇವಾಲಯವು ಹಿಂದೂ ಮತ್ತು ಮುಸ್ಲಿಮರ ನಡುವಿನ ಕೋಮು ಸೌಹಾರ್ದತೆ ಮತ್ತು ಸಹೋದರತೆಗೆ ಉದಾಹರಣೆಯಾಗಿದೆ.
ಇಲ್ಲಿನ ನಲ್ಬಾರಿ ಜಿಲ್ಲೆಯ 350ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ಬಿಲ್ಲೇಶ್ವರ ದೇವಸ್ಥಾನದ ದೈನಂದಿನ ಪೂಜೆಯಲ್ಲಿ ಮುಸ್ಲಿಮರು ಭಾಗವಹಿಸುತ್ತಾರೆ. ನವರಾತ್ರಿಯಿಂದಾಗಿ ದೇವಾಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಮುಸ್ಲಿಮರು ಕೂಡಾ ಆಚರಣೆಯಲ್ಲಿ ತೊಡಗಿದ್ದಾರೆ.
"ಬಿಲ್ಲೇಶ್ವರ ದೇವಲಯವನ್ನು ಯಾವಾಗ ಸ್ಥಾಪಿಸಲಾಯಿತು ಎಂಬ ನಿಖರವಾದ ದಿನಾಂಕ ತಿಳಿದಿಲ್ಲ. ಆದರೆ ಇದನ್ನು ನರಕಾಸುರನ ಸಮಕಾಲೀನನಾಗಿದ್ದ ರಾಜ ನಾಗಾಕ್ಷನು ಸ್ಥಾಪಿಸಿದನೆಂದು ಹೇಳುವ ಕಲ್ಲಿನ ಶಾಸನಗಳಿವೆ" ಎಂದು ಅರ್ಚಕ ರಂಜಿತ್ ಮಿಶ್ರಾ ಮಾಹಿತಿ ನೀಡಿದರು.
ಅಸ್ಸೋಂನ ನಲ್ಬಾರಿ ಪಟ್ಟಣದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಬಿಲ್ಲೇಶ್ವರ ದೇವಲಯದಲ್ಲಿ ಮುಸ್ಲಿಮರಿಗೂ ಪ್ರಸಾದ ವಿತರಿಸುವ ವಿಶಿಷ್ಟ ಸಂಪ್ರದಾಯವಿದೆ. ಹೀಗಾಗಿ ಮುಸ್ಲಿಮರು ಇಲ್ಲಿನ ದೈನಂದಿನ ಆಚರಣೆಗಳ ಅವಿಭಾಜ್ಯ ಅಂಗವಾಗಿದ್ದಾರೆ.
ಸಮೀಪದಲ್ಲಿ ವಾಸಿಸುವ ಮುಸ್ಲಿಮರು ಹಿಂದೂಗಳೊಂದಿಗೆ ಉತ್ಸಾಹದಿಂದ ಪೂಜೆ ಹಾಗೂ ನವರಾತ್ರಿ ಉತ್ಸವಗಳಲ್ಲಿ ಭಾಗವಹಿಸುತ್ತಾರೆ.