ಎರಡು ದಿನಗಳ ನಂತರ ಬಿಡುಗಡೆಯಾದ ವಿವರವಾದ ತೀರ್ಪಿನಲ್ಲಿ ನ್ಯಾಯಾಧೀಶರುಗಳು ಪಾಕಿಸ್ತಾನದ ಸೇನೆಯ ವಿರುದ್ಧ ಬಲವಾದ ಅಭಿಪ್ರಾಯ ದಾಖಲಿಸಿದ್ದಾರೆ. ನ್ಯಾಯಮೂರ್ತಿ ಸೇಠ್ ತಮ್ಮ ತೀರ್ಪಿನಲ್ಲಿ ಹೀಗೆ ಉಲ್ಲೇಖಿಸಿದ್ದಾರೆ: ‘ಸಮವಸ್ತ್ರ ತೊಟ್ಟ ಒಬ್ಬ ವ್ಯಕ್ತಿ ಇಂತಹ ವಿಪರೀತದ ಕೃತ್ಯಕ್ಕೆ ಹೇಗೆ ಕೈ ಹಾಕುತ್ತಾನೆ ಎಂಬುದು ನಂಬಲಾಗದ ಮತ್ತು ಊಹಿಸಲಾಗದ ಸಂಗತಿ. ಅಂದಿನ ಕಾರ್ಪ್ಸ್ ಕಮಾಂಡರ್ಸ್ ಕಮಿಟಿ ಮತ್ತು ಅನುಕ್ಷಣವೂ ಆತನ ಕಾವಲು ಕಾಯುತ್ತಿದ್ದ ಬೂಟು ಮತ್ತು ಸಮವಸ್ತ್ರ ತೊಟ್ಟ ಎಲ್ಲ ಅಧಿಕಾರಿಗಳು ಕೂಡ ಆರೋಪಿಯ ಉದ್ದೇಶ ಮತ್ತು ಕೃತ್ಯಗಳಲ್ಲಿ ಸಮಾನವಾಗಿ ಮತ್ತು ಸಂಪೂರ್ಣವಾಗಿ ಭಾಗಿಯಾಗಿದ್ದರು‘ ಎಂದು ಅಭಿಪ್ರಾಯಪಟ್ಟಿದ್ದಾರೆ.
2016 ರಿಂದ ದೇಶ ತೊರೆದಿರುವ ಮುಷರಫ್ ಅವರನ್ನು ಯಾವುದೇ ವೇಳೆಯಲ್ಲಿ ತಕ್ಷಣಕ್ಕೆ ಗಲ್ಲಿಗೇರಿಸುತ್ತಾರೆ ಎಂದು ಹೇಳಲಾಗದು. ಇನ್ನು, ಈ ತೀರ್ಪು ಪಾಕಿಸ್ತಾನದ ನಾಗರಿಕ - ಸೇನಾ ಸಂಬಂಧಗಳ ಸ್ವರೂಪದ ಮೇಲೆ ಬಹುದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ನಾನು ‘ಸಾಧ್ಯ’ ಎಂಬ ಪದವನ್ನು ಏಕೆ ಬಳಸುತ್ತಿದ್ದೇನೆ ಎಂದರೆ ಪಾಕಿಸ್ತಾನದ ರಾಜಕಾರಣಿಗಳು, ಸೇನಾ ಹಿಡಿತದ ರಾಜಕೀಯ ಚೌಕಟ್ಟಿನಿಂದ ಹೊರಬರುವ ಅವಕಾಶವಾಗಿ ಪ್ರಕರಣವನ್ನು ನೋಡುತ್ತಾರೆಯೇ ಎಂಬುದರ ಮೇಲೆ ಇದು ಪೂರ್ಣ ಅವಲಂಬಿತ ಆಗಿದೆ.
ವಿಶೇಷ ಕೋರ್ಟ್ ದಾರಿಯೊಂದನ್ನು ತೋರಿದೆ. 'ಅಗತ್ಯತೆಯ ಸಿದ್ಧಾಂತ'ದ ನೆಪ ಒಡ್ಡಿ ದೇಶದ ಮೇಲೆ ಸೈನ್ಯ ಪದೇ ಪದೇ ಹಿಡಿತ ಸಾಧಿಸಲು ಪಾಕಿಸ್ತಾನದ ಕೋರ್ಟುಗಳು ಸಮ್ಮತಿಸಿವೆ ಎಂಬುದು ಹಿಂದಿನಿಂದ ಕೇಳಿಬರುತ್ತಿದ್ದ ಆರೋಪ. ಸಂವಿಧಾನೇತರ ಸಂಸ್ಥೆಯೊಂದು ಜನರ ಒಳಿತಿಗಾಗಿ ಸರ್ಕಾರವನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ಹೇಳುತ್ತದೆ ಅಗತ್ಯತೆಯ ಸಿದ್ಧಾಂತ. 1977 ರಲ್ಲಿ ಚುನಾಯಿತ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೊ ಅವರನ್ನು ಪದಚ್ಯುತಗೊಳಿಸಿದ ಜನರಲ್ ಜಿಯಾ ಉಲ್ ಹಕ್ ಅವರ ಸೇನಾ ದಂಗೆಯನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಸಮರ್ಥಿಸಿತ್ತು. ಪ್ರಧಾನಿ ನವಾಜ್ ಷರೀಫ್ ವಿರುದ್ಧದ ಮುಷರಫ್ ಅವರ ದಂಗೆಯಲ್ಲಿ ಸುಪ್ರೀಂಕೋರ್ಟ್ ಇದೇ ಬಗೆಯ ನಿರ್ಧಾರ ಕೈಗೊಂಡಿತ್ತು.
ನ್ಯಾಯಾಂಗ ಈಗ ಖುದ್ದು ಭಿನ್ನ ಧ್ವನಿ ಎತ್ತಿದೆ. ಪ್ರಧಾನಿ ಇಮ್ರಾನ್ ಖಾನ್ ಅವರು ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಅವರ ಸೇವೆಯ ಅವಧಿಯನ್ನು ಮೂರು ವರ್ಷಗಳ ಕಾಲ ವಿಸ್ತರಿಸಿದ್ದ ಆದೇಶಕ್ಕೆ ಕಳೆದ ತಿಂಗಳು ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ಪ್ರಕರಣ ಮತ್ತು ಮರಣದಂಡನೆ ಆದೇಶವನ್ನು ಒಟ್ಟಿಗೆ ನೋಡಿದರೆ ಎರಡೂ ತೀರ್ಪುಗಳು ಕಾನೂನಿಗಿಂತಲೂ ಪಾಕಿಸ್ತಾನ ಸೈನ್ಯ ಮಿಗಿಲಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸುತ್ತಿರುವಂತೆ ತೋರುತ್ತದೆ.
ಸಂಶಯವೇ ಇಲ್ಲ, ಇಂತಹ ತೀರ್ಪು ಪಾಕಿಸ್ತಾನ ಸೇನೆಗೆ ಅಪ್ಯಾಯಮಾನವಾಗಿಯೇನೂ ಇರದು. ಹುಸೇನ್ ಹಕ್ಕಾನಿ ತಮ್ಮ ‘ಪಾಕಿಸ್ತಾನ್: ಬಿಟ್ವೀನ್ ಮಾಸ್ಕ್ ಅಂಡ್ ಮಿಲಿಟರಿ’ ಎಂಬ ಕೃತಿಯಲ್ಲಿ, 2007 ಮತ್ತು 2013 ರ ನಡುವೆ 100 ಮಿಲಿಟರಿ ಅಧಿಕಾರಿಗಳನ್ನು ಸಂದರ್ಶಿಸಿದ ಪ್ರೊ. ಅಕಿಲ್ ಷಾ ಅವರ ಬಗ್ಗೆ ಬರೆಯುತ್ತಾರೆ. 'ಬಿಕ್ಕಟ್ಟಿನ' ಪರಿಸ್ಥಿತಿಗಳಲ್ಲಿ ದಂಗೆ ಎಂಬುದು ಆಡಳಿತ ಬದಲಾವಣೆಯ ನ್ಯಾಯಸಮ್ಮತ ರೂಪ ಮತ್ತು ರಾಜಕಾರಣಿಗಳು ರಾಷ್ಟ್ರೀಯ ಭದ್ರತೆಯನ್ನು ನಿರ್ವಹಿಸಲು ಅಸಮರ್ಥರು ಎಂದು ನಾಲ್ಕರಲ್ಲಿ ಮೂರು ಭಾಗದಷ್ಟು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ನೀತಿಯ ಮೇಲೆ ಪ್ರಭಾವ ಬೀರುವ ತನ್ನ ಶಕ್ತಿ ಕಳೆದುಕೊಳ್ಳಲು ಪಾಕಿಸ್ತಾನ ಸೇನೆ ಬಯಸದು. ಮುಷರಫ್ ವಿರುದ್ಧದ ತೀರ್ಪು ಹೊರಬಿದ್ದ ಕೂಡಲೇ ಸೇನೆಯ ಮಾಧ್ಯಮ ವಿಭಾಗವಾಗಿರುವ ಅಂತರ–ಸೇವಾ ಸಾರ್ವಜನಿಕ ಸಂಪರ್ಕ ( ಐ ಎಸ್ ಪಿ ಆರ್ ) ಸಂಸ್ಥೆಯ ಮಹಾ ನಿರ್ದೇಶಕರು ಪತ್ರಿಕಾ ಪ್ರಕಟಣೆ ಹೊರಡಿಸಿದರು. ಅದರಲ್ಲಿ,’ಪಾಕಿಸ್ತಾನ ಸಶಸ್ತ್ರ ಪಡೆಗಳಿಗೆ ಭರಿಸಲಾರದ ನೋವು ಮತ್ತು ದುಃಖದ ಸಂಗತಿ’ ಎಂದು ಅಭಿಪ್ರಾಯಪಡಲಾಗಿದೆ ಮತ್ತು ‘ಸೂಕ್ತ ಕಾನೂನು ಪ್ರಕ್ರಿಯೆಯನ್ನು ಕಡೆಗಣಿಸಿರುವಂತೆ ತೋರುತ್ತದೆ’ ಎಂದು ಹೇಳಿದೆ.
ಸಶಸ್ತ್ರ ಪಡೆಗಳ ನೋವು ಕಾನೂನು ಪ್ರಕ್ರಿಯೆಯನ್ನು ಪ್ರಶ್ನಿಸಲು ಸಾಕು ಎಂಬ ಸಮರ್ಥನೆ ಇರುವ ಈ ಹೇಳಿಕೆ ಸೇನೆ ಕಾರ್ಯ ನಿರ್ವಹಿಸುವ ಪ್ರಜಾಪ್ರಭುತ್ವದಲ್ಲಿ ಮಹತ್ವದ್ದಾಗಿದೆ.
ದುರದೃಷ್ಟವಶಾತ್, ಸೇನೆಯ ಮೇಲೆ ಅಧಿಕಾರ ಚಲಾಯಿಸಲು ಇರುವ ಈ ಅವಕಾಶವನ್ನು ಪಾಕಿಸ್ತಾನದ ರಾಜಕೀಯ ನಾಯಕತ್ವ ಬಳಸಿಕೊಳ್ಳುತ್ತಿಲ್ಲ. ಐ ಎಸ್ ಪಿ ಆರ್ ಪತ್ರಿಕಾ ಪ್ರಕಟಣೆಯ ನಂತರ, ಪಾಕಿಸ್ತಾನ ಅಟಾರ್ನಿ ಜನರಲ್ ಪತ್ರಿಕಾಗೋಷ್ಠಿ ನಡೆಸಿ, “ಸಂವಿಧಾನದ 10 - ಎ ವಿಧಿಯ ಅಡಿಯಲ್ಲಿ ನ್ಯಾಯಸಮ್ಮತ ವಿಚಾರಣೆ ನಡೆಯಬೇಕಿತ್ತು. ಮುಷರಫ್ ವಿರುದ್ಧದ ದೇಶದ್ರೋಹದಂತಹ ಮಹತ್ವದ ಪ್ರಕರಣದಲ್ಲಿ ಇದು ಸಾಧ್ಯ ಆಗಿಲ್ಲ. ಅಲ್ಲದೆ ತೀರ್ಪು ಕಾನೂನುಬಾಹಿರ. ನ್ಯಾಯ ಸಮ್ಮತ ವಿಚಾರಣೆ ನಡೆಸುವುದು ಮಾತ್ರವಲ್ಲ, ನಡೆಸಿದ ವಿಚಾರಣೆ ನ್ಯಾಯ ಸಮ್ಮತವಾಗಿ ಇರಬೇಕು ಎಂದು ತೋರುತ್ತದೆ’ ಎಂಬುದಾಗಿ ಹೇಳಿದ್ದಾರೆ. ಪಾಕಿಸ್ತಾನ ಸೇನೆ ಸರ್ಕಾರದ ಮೇಲೆ ಒತ್ತಡ ಹೇರಿರುವುದಂತೂ ಸ್ಪಷ್ಟ.
ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುತ್ತದೆ ಎಂಬುದು ನಿರೀಕ್ಷಿತ ಸಂಗತಿ. ಪಾಕಿಸ್ತಾನದ ರಾಜಕೀಯ ನಾಯಕತ್ವ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಗಮನಿಸುವುದು ಮುಖ್ಯ. ಪಾಕಿಸ್ತಾನದ ಸೇನಾ ಪ್ರಾಬಲ್ಯದ ಇತಿಹಾಸ ತಕ್ಷಣಕ್ಕೆ ಮೊಟಕುಗೊಳ್ಳುವ ಸಾಧ್ಯತೆ ಇಲ್ಲ. ಆದರೆ ದೇಶದಲ್ಲಿ ನಿಷ್ಕ್ರಿಯಗೊಂಡಿರುವ ಕೆಲ ನಾಗರಿಕ - ಸೇನಾ ಸಂಬಂಧಗಳನ್ನು ಸರಿಪಡಿಸಲು ಇದು ಅವಕಾಶ ಒದಗಿಸಲಿದೆ. ಚೆಂಡು ಈಗ ಇಮ್ರಾನ್ ಖಾನ್ ಅವರ ಅಂಗಳದಲ್ಲಿ ಇದೆ.
ಲೇಖಕರು: ಡಿ. ಎಸ್. ಹೂಡಾ, ನಿವೃತ್ತ ಲೆಫ್ಟಿನೆಂಟ್ ಜನರಲ್