ಮುಂಬೈ: ರೂಮ್ಮೇಟ್ಗಳಿಬ್ಬರು ಯುವಕನ ಬೆತ್ತಲೆ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಕ್ಕೆ ಹೆದರಿದ ಆತ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮುಂಬೈನ ವನಗಾವ್ನಲ್ಲಿ ನಡೆದಿದೆ.
ಬೊಯಿಸರ್ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಪ್ರಾಣಕಳೆದುಕೊಂಡಿದ್ದಾನೆ. ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಮೃತ ಯುವಕನ ರೂಮ್ಮೇಟ್ಗಳಾಗಿದ್ದ ಇಬ್ಬರು ಬ್ಲ್ಯಾಕ್‌ಮೇಲ್ ಮಾಡಿದ್ದರಿಂದಲೇ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಆಗಿದ್ದೇನು?
ಕಳೆದ ವಾರ ಮನೆಯಲ್ಲಿಯೇ ಮೂವರು ಪಾರ್ಟಿ ಮಾಡಿ, ಮದ್ಯ ಸೇವಿಸಿ ಮಲಗಿದ್ದರು. ಮೃತ ಯುವಕ ಬೆಳಗ್ಗೆ ಎದ್ದಾಗ ಆತನ ಬೆತ್ತಲೆ ಚಿತ್ರವನ್ನು ತೋರಿಸಿ ಗೆಳೆಯರಿಬ್ಬರು ಕಿಚಾಯಿಸಿದ್ದಾರೆ. ತಮಾಷೆ ಸಾಕು ಮಾಡಿ, ಫೋಟೋಗಳನ್ನು ಡಿಲೀಟ್ ಮಾಡಿ ಅಂತಾ ಬೇಡಿಕೊಂಡರೂ ಕೇಳದೆ, ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದರು ಎಂದು ತಿಳಿದುಬಂದಿದೆ.
ಮತ್ತೆ ಮತ್ತೆ ಅದೇ ಫೋಟೋ ತೋರಿಸುತ್ತಾ, ಸೋಷಿಯಲ್ ಮೀಡಿಯಾಗೆ ಹಾಕುವುದಾಗಿ ಬೆದರಿಸಿ ಹಣ ಪಡೆಯುತ್ತಿದ್ದರು. ಇದರಿಂದ ಬೇಸತ್ತ ಯುವಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.
ರೇಮ್ಮೇಟ್ಗಳಿಬ್ಬರ ಮೊಬೈಲ್ನಲ್ಲಿ ಯುವಕನ ಬೆತ್ತಲೆ ಚಿತ್ರಗಳು ಇದ್ದದ್ದನ್ನು ದೃಢಪಡಿಸಿಕೊಂಡ ಪೊಲೀಸರು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಫೋಟೋಗಳನ್ನು ಡಿಲೀಟ್ ಮಾಡುವಂತೆ ಮೃತ ಯುವಕ ಹಲವು ಬಾರಿ ಮೆಸೇಜ್ ಮಾಡಿ ಬೇಡಿಕೊಂಡಿದ್ದೂ ಪೊಲೀಸರಿಗೆ ತಿಳಿದುಬಂದಿದೆ. ಸದ್ಯ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.