ಮುಂಬೈ: ಕೋವಿಡ್ ಲಾಕ್ಡೌನ್ನಿಂದಾಗಿ ಸ್ಥಗಿತಗೊಂಡಿದ್ದ ಮಹಾರಾಷ್ಟ್ರದ ಮುಂಬೈನ ಮೋನೊ ರೈಲು ಸೇವೆ ಏಳು ತಿಂಗಳುಗಳ ಬಳಿಕ ಇಂದಿನಿಂದ ಪುನರಾರಂಭಗೊಂಡಿದೆ.
ರೈಲಿನಲ್ಲಿ ಸ್ಯಾನಿಟೈಜರ್, ಪ್ರತಿ ನಿಲ್ದಾಣದ ಪ್ರವೇಶ ದ್ವಾರಗಳಲ್ಲಿ ಪ್ರಯಾಣಿಕರ ದೇಹದ ತಾಪಮಾನ ಪರೀಕ್ಷಿಸುವ ಯಂತ್ರಗಳ ಅಳವಡಿಕೆ ಸೇರಿದಂತೆ ಸಕಲ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮೋನೊ ರೈಲು ಆಡಳಿತವು ಸೇವೆ ಆರಂಭಿಸಿದೆ.
ಮಾರ್ಚ್ 22 ರಂದು ಸ್ಥಗಿತಗೊಂಡಿದ್ದ ಮೋನೊ ರೈಲು ಇಂದು ಚೆಂಬೂರಿನಿಂದ ಕಿಂಗ್ ಸರ್ಕಲ್ಗೆ ಚಲಿಸಿದೆ. ಮೊದಲ ದಿನವಾದ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಂದಿಲ್ಲ. ನಾಳೆಯಿಂದ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತದೆ. ಅಗತ್ಯವಿದ್ದರೆ ನಾಳೆಯಿಂದ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಹಿರಿಯ ಅಧಿಕಾರಿ ರೋಹನ್ ಸಲುಂಖೆ ಹೇಳಿದ್ದಾರೆ.
ಇನ್ನು ನಗರದಲ್ಲಿ ಅಕ್ಟೋಬರ್ 19 ರಿಂದ ಮೆಟ್ರೋ ಸೇವೆ ಪುನರಾರಂಭಗೊಳ್ಳಲಿದ್ದು, ವರ್ಸೋವಾದಿಂದ ಘಟ್ಕೋಪರ್ ನಿಲ್ದಾಣದವರೆಗೆ ಸಂಚರಿಸಲಿದೆ.