ಮುಂಬೈ: ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ, ನಟ ದಿಲೀಪ್ ಕುಮಾರ್ ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಿದ 62 ವರ್ಷದ ವೈದ್ಯ ಜಲೀಲ್ ಪಾರ್ಕರ್ಗೂ ಕೋವಿಡ್-19 ಬಾಧಿಸಿತ್ತು.
ಇದೀಗ ಸೋಂಕಿನೊಂದಿಗೆ ಹೋರಾಡಿ ಗುಣಮುಖ ಆಗಿರುವ ಅವರು, ಸಾವಿನೊಂದಿಗೆ ಮುಖಾಮುಖಿಯಾಗಿ ಬಂದಿದ್ದೇನೆ ಎಂದು ಹೇಳಿದ್ದಾರೆ. ಲೀಲಾವತಿ ಆಸ್ಪತ್ರೆಯಲ್ಲಿ 200ಕ್ಕೂ ಹೆಚ್ಚು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇನೆ ಎಂದು ಪಾರ್ಕರ್ ಹೇಳಿದ್ದಾರೆ.
"ಒಂದು ದಿನ ಇದ್ದಕ್ಕಿದ್ದಂತೆ ನನಗೆ ಬೆನ್ನುನೋವು ಕಾಣಿಸಿತು. ಜ್ವರ, ಶೀತ ಮತ್ತು ಉಸಿರಾಟದ ತೊಂದರೆಯೂ ಇರಲಿಲ್ಲ. ಲೀಲಾವತಿ ಆಸ್ಪತ್ರೆಯ ನಿರ್ವಾಹಕರು ತಕ್ಷಣ ಆ್ಯಂಬುಲೆನ್ಸ್ ಕಳುಹಿಸಿದ್ದರು. ಬಳಿಕ ಕೋವಿಡ್-19 ವರದಿ ಪಾಸಿಟಿವ್ ಬಂದಿತ್ತು. ಇದು ನನ್ನ ಹಸಿವು, ರುಚಿ ಹಾಗೂ ವಾಸನೆಯ ಪ್ರಜ್ಞೆಯ ಮೇಲೂ ಪರಿಣಾಮ ಬೀರಿತ್ತು" ಎಂದು ಪಾರ್ಕರ್ ಹೇಳಿದ್ದಾರೆ.
ನನ್ನ ಹೆಂಡತಿ ವರದಿ ಕೂಡಾ ಪಾಸಿಟಿವ್ ಬಂದ ಕಾರಣ ಅದೇ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ನಾನು ಧೈರ್ಯಶಾಲಿಯಾಗಿದ್ದೆ ಎಂದು ಅವರು ಹೇಳಿದರು.
"ಮೌತ್ ಕೆ ಮೂಹ್ ಸೆ ಬಹರ್ ಆಯಾ ಹುನ್ (ನಾನು ಸಾವಿನ ಬಾಯಿಯಿಂದ ಹೊರ ಬಂದಿದ್ದೇನೆ). ನನ್ನ ಸಹೋದ್ಯೋಗಿ ವೈದ್ಯರು ಸರಿಯಾದ ಚಿಕಿತ್ಸೆ ನೀಡಿದ್ದರಿಂದ ಗುಣಮುಖನಾಗಿದ್ದೇನೆ" ಎಂದು ಪಾರ್ಕರ್ ಹೇಳಿದ್ದಾರೆ.
ವೈದ್ಯರ ಶ್ರಮಕ್ಕೆ ಅವರಿಗೆ ಪ್ರೋತ್ಸಾಹ ನೀಡಬೇಕು. ಕೊರೊನಾ ರೋಗಿಗಳನ್ನು ಅಸ್ಪೃಶ್ಯರಂತೆ ಕಾಣಬಾರದು ಎಂದು ಅವರು ತಿಳಿಸಿದ್ದಾರೆ.