ಸಾಗರ್: ದೇಶವೇ ಮಹಾಮಾರಿ ಕೊರೊನಾದಿಂದ ತತ್ತರಿಸಿ ಹೋಗಿದ್ದು, ಯಾವುದೇ ಕಾರಣಕ್ಕೂ ಮಾಸ್ಕ್ ಹಾಕಿಕೊಳ್ಳದೇ ಮನೆಯಿಂದ ಹೊರಬರಬೇಡಿ ಎಂದು ಎಲ್ಲ ರಾಜ್ಯಗಳು ಈಗಾಗಲೇ ಜನರಿಗೆ ಖಡಕ್ ಸೂಚನೆ ನೀಡಿವೆ. ಇದರ ಮಧ್ಯೆ ಮಾಸ್ಕ್ ಹಾಕಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಅವಹೇಳನ ಮಾಡಿದ್ದ ವ್ಯಕ್ತಿಯಲ್ಲಿ ಇದೀಗ ಈ ವೈರಸ್ ಕಾಣಿಸಿಕೊಂಡಿದೆ.
ಮಧ್ಯಪ್ರದೇಶದ ಸಾಗರ್ನಲ್ಲಿ ಟಿಕ್ಟಾಕ್ ಮಾಡ್ತಿದ್ದ ವ್ಯಕ್ತಿಯೋರ್ವ ಕಳೆದ ಕೆಲ ದಿನಗಳ ಹಿಂದೆ ಮಾಸ್ಕ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಟಿಕ್ಟಾಕ್ ಮಾಡಿ ಅದರಲ್ಲಿ ಅವಹೇಳನ ಮಾಡಿದ್ದನು. ಇದರಲ್ಲಿ ದೇವರ ಮೇಲೆ ನೀವೂ ನಂಬಿಕೆ ಇಡಬೇಕೇ ಹೊರತು ಮಾಸ್ಕ್ ಮೇಲೆ ಅಲ್ಲ ಎಂದು ಹೇಳಿದ್ದ. ಇದೀಗ ಅದೇ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.
ತುಂಡು ಬಟ್ಟೆ ಮೇಲೆ ನಂಬಿಕೆ ಇಡುವುದನ್ನು ಬಿಟ್ಟು ಮೇಲಿರುವ ದೇವರ ಮೇಲೆ ನಂಬಿಕೆ ಇಡಿ ಎಂದು ಹೇಳಿದ್ದ ಟಿಕ್ಟಾಕ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅದಕ್ಕೆ ವಿರೋಧ ಕೂಡ ವ್ಯಕ್ತವಾಗಿತ್ತು. ಇದೀಗ 25 ವರ್ಷದ ವ್ಯಕ್ತಿಯನ್ನ ಇದೀಗ ಬುಂದೇಲ್ಖಂಡ್ನ ಐಸೋಲೇಷನ್ ವಾರ್ಡ್ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವ್ಯಕ್ತಿ ಕಳೆದ ಕೆಲ ದಿನಗಳ ಹಿಂದೆ ಜಬಲ್ಪುರ್ದಲ್ಲಿರುವ ತನ್ನ ಸಹೋದರಿ ಮನೆಗೆ ತೆರಳಿದ್ದನು. ಆತನಲ್ಲಿ ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದರಿಂದ ಟೆಸ್ಟ್ ನಡೆಸಲಾಗಿದ್ದು, ಈ ವೇಳೆ ಮಹಾಮಾರಿ ಇರುವುದು ಕನ್ಫರ್ಮ್ ಆಗಿದೆ.
ಇನ್ನು ವಾರ್ಡ್ನಿಂದಲೇ ಹುಚ್ಚಾಟ ಮುಂದುವರಿಸಿದ್ದ ಈ ವ್ಯಕ್ತಿ ಟಿಕ್ಟಾಕ್ನಲ್ಲಿ ಕೆಲವೊಂದು ವಿಡಿಯೋ ಅಪ್ಲೋಡ್ ಮಾಡಿದ್ದು, ತನಗೆ ಕೊರೊನಾ ಕಾಣಿಸಿಕೊಂಡಿದ್ದು, ದೇವರಲ್ಲಿ ಪ್ರಾರ್ಥನೆ ಮಾಡಿ ಎಂದು ಹೇಳಿದ್ದ ವಿಡಿಯೋ ಹರಿಬಿಟ್ಟಿದ್ದನು.ಇದರಿಂದ ಆಕ್ರೋಶಗೊಂಡ ಪೊಲೀಸರು ಆತನ ಮೊಬೈಲ್ ಕಿತ್ತುಕೊಂಡಿದ್ದಾರೆ.