ಇಂದೋರ್ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಸೋಮವಾರದಂದು ಹಿರಿಯ ಬಿಜೆಪಿ ಮುಖಂಡ ಗೋಪಿಕೃಷ್ಣ ನೇಮಾ ಅವರ ಮನೆ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಸಂಜೆ ನಡೆದ ಘಟನೆಯಲ್ಲಿ ಬಿಜೆಪಿ ನಾಯಕ ಮತ್ತು ಅವರ ಕುಟುಂಬ ಸದಸ್ಯರು ಸುರಕ್ಷಿತವಾಗಿದ್ದಾರೆ. ಆದ್ರೆ ಅಪರಿಚಿತ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಈ ಬಿಜೆಪಿ ನಾಯಕನ ಮನೆಗೆ ಭೇಟಿ ನೀಡಿದ್ದ ಅಯಾಜ್ ಗುಡ್ಡು ಅವರೊಂದಿಗೆ ಹಣದ ವಿವಾದವಿತ್ತು. ನಂತರ ಗುಂಪೊಂದು ಗೋಪಿಕೃಷ್ಣ ನೇಮಾ ಅವರ ಮನೆ ಮೇಲೆ ದಾಳಿ ನಡೆಸಿದೆ ಎಂದು ಘಟನಾ ಸ್ಥಳಕ್ಕಾಗಮಿಸಿದ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಹರಿನಾರಾಯಣ್ ಚಾರಿ ಮಿಶ್ರಾ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಆರೋಪಿಗಳನ್ನು ಗುರುತಿಸಲಾಗಿದ್ದು, ಅವರನ್ನು ಬಂಧಿಸಲು ಶೋಧ ಕಾರ್ಯ ನಡೆಯುತ್ತಿದೆ ಎಂದು ಡಿಐಜಿ ತಿಳಿಸಿದ್ದಾರೆ.
ಬಿಜೆಪಿ ಮುಖಂಡ ಗೋಪಿಕೃಷ್ಣ ನೇಮಾ ಮಾತನಾಡಿ, ಶಸ್ತ್ರಾಸ್ತ್ರಗಳನ್ನು ಹಿಡಿದು ಸುಮಾರು 40 ಮಂದಿ ನಮ್ಮ ಮನೆ ಮೇಲೆ ದಾಳಿ ನಡೆಸಿದ್ದಾರೆ. ಘಟನೆ ಸಂದರ್ಭ ಬಾಗಿಲು ಮುಚ್ಚಿದ್ದರಿಂದ ಯಾವುದೇ ತೊಂದರೆಗಳಾಗಿಲ್ಲ. ಆದ್ರೆ, ಮನೆ ಮುಂಭಾಗದ ಕಿಟಕಿ, ನಾಮಫಲಕ ಸೇರಿದಂತೆ ಹೂವಿನ ಮಡಕೆಗಳನ್ನು ಹಾನಿಗೊಳಿಸಿದ್ದಾರೆಂದು ತಿಳಿಸಿದರು.