ನವದೆಹಲಿ/ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್ ಏರ್ಪೋರ್ಟ್ನಲ್ಲಿ ಇಳಿಯಲು ಯತ್ನಿಸುವಾಗ ಅಪಘಾತಕ್ಕೀಡಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಸಾವಿಗೀಡಾದ ಸಹ ಪೈಲಟ್ ಅಖಿಲೇಶ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ.
ಇದೇ ವೇಳೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರು ಅಖಿಲೇಶ್ ಕುಮಾರ್ ಅವರಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ. ಪಾರ್ಥಿವ ಶರೀರವನ್ನು ಉತ್ತರ ಪ್ರದೇಶದ ಮಥುರಾದಲ್ಲಿರುವ ಅವರ ಸ್ವಗೃಹಕ್ಕೆ ಕೊಂಡೊಯ್ಯಲಾಗುತ್ತಿದೆ. ಇದಕ್ಕೂ ಮುನ್ನ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪೈಲಟ್ ಮತ್ತು ಸಹ ಪೈಲಟ್‌ನ ಪಾರ್ಥಿವ ಶರೀರವನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು.
ಈ ಬಗ್ಗೆ ಮಾತನಾಡಿದ ಮಲಪ್ಪುರಂ ಜಿಲ್ಲಾಧಿಕಾರಿ ಕೆ ಗೋಪಾಲಕೃಷ್ಣನ್, "ಶನಿವಾರ ಸಂಜೆ 5ರ ಸುಮಾರಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಧಿಕಾರಿಗಳೊಂದಿಗೆ ಬಂದ ಅವರ ಕುಟುಂಬಗಳಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು. ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಲು ಅವರು ಕೊಚ್ಚಿನ್ಗೆ ತೆರಳಿದ್ದಾರೆ" ಎಂದು ಹೇಳಿದ್ದರು.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದಲ್ಲಿ 18 ಮಂದಿ ಸಾವನ್ನಪ್ಪಿದ್ರೆ,172 ಮಂದಿ ಗಾಯಗೊಂಡಿದ್ದರು. ಈ ದುರಂತದಲ್ಲಿ ವಿಮಾನದ ಪೈಲಟ್ ಕ್ಯಾಪ್ಟನ್ ದೀಪಕ್ ವಸಂತ್ ಸಾಥೆ ಮತ್ತು ಸಹ ಪೈಲಟ್ ಅಖಿಲೇಶ್ ಕುಮಾರ್ ಸಾವನ್ನಪ್ಪಿದ್ದಾರೆ.