ನವದೆಹಲಿ: ಭಾರತದಲ್ಲಿ ವರದಿಯಾದ ಕೋವಿಡ್-19 ಪ್ರಕರಣಗಳಲ್ಲಿ ಮುಕ್ಕಾಲು ಭಾಗದಷ್ಟು ಸೋಂಕಿತರು ಚೇತರಿಸಿಕೊಂಡಿದ್ದು, ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೇಶದ ಚೇತರಿಕೆಯ ಪ್ರಮಾಣ ಶೇಕಡಾ 77.65ರಷ್ಟಿದ್ದು, ಸಕ್ರಿಯ ಪ್ರಕರಣಗಳು ಶೇಕಡಾ 20.7ರಷ್ಟಿದೆ ಎಂದು ಸಚಿವಾಲಯವು ಟ್ವೀಟ್ ಮೂಲಕ ತಿಳಿಸಿದೆ.

"ಚೇತರಿಸಿಕೊಂಡ ಪ್ರಕರಣಗಳ ಶೇಕಡಾವಾರು ಮತ್ತು ಸಕ್ರಿಯ ಪ್ರಕರಣಗಳ ಶೇಕಡಾವಾರು ನಡುವಿನ ಅಂತರವು ಹಂತ ಹಂತವಾಗಿ ವ್ಯಾಪಕವಾಗಿ ಬೆಳೆಯುತ್ತಿದೆ. ಒಟ್ಟು ಪ್ರಕರಣಗಳಲ್ಲಿ 3/4 ಭಾಗದಷ್ಟು ಜನ ಗುಣಮುಖರಾಗಿದ್ದಾರೆ" ಎಂದು ಟ್ವೀಟ್ನಲ್ಲಿ ತಿಳಿಸಿಲಾಗಿದೆ.
"ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಕೋವಿಡ್ ನಿರ್ವಹಣಾ ಕಾರ್ಯತಂತ್ರಗಳು ಸುಲಭ ಪರೀಕ್ಷೆಯ ಮೂಲಕ ಆರಂಭಿಕ ಹಂತದಲ್ಲೇ ಸೋಂಕು ಪತ್ತೆ ಹಚ್ಚುವ ಕುರಿತು ಕೇಂದ್ರೀಕರಿಸಿದೆ. ಆಸ್ಪತ್ರೆಗಳಲ್ಲಿ ಗುಣಮಟ್ಟದ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಮರಣ ಪ್ರಮಾಣ ಕಡಿಮೆಯಾಗುತ್ತಿದೆ" ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಕಳೆದ 24 ಗಂಟೆಗಳಲ್ಲಿ 96,551 ಹೊಸ ಪ್ರಕರಣಗಳು ಮತ್ತು 1,209 ಸಾವುಗಳು ದಾಖಲಾಗಿದ್ದು, 81,533 ಮಂದಿ ಗುಣಮುಖರಾಗಿದ್ದಾರೆ. ಭಾರತದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 45 ಲಕ್ಷ ದಾಟಿದೆ.