ದೇಶಾದ್ಯಂತ ಮುಂಗಾರು ಮಾರುತಗಳು ಆವರಿಸುತ್ತಿದ್ದು, ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂಗಾರು ಮಳೆ ಸುರಿಯಲಾರಂಭಿಸಿದೆ. ಮುಂಗಾರು ಮಳೆಯ ಸೊಬಗು, ಅದು ತರುವ ಹರುಷ ಬೇರಾವುದಕ್ಕೂ ಸಾಟಿ ಇಲ್ಲ. ಆದರೆ ಮುಂಗಾರು ಮಳೆಯೊಂದಿಗೆ ಮಲೇರಿಯಾ ಕೂಡ ಕೆಲವೆಡೆ ಹರಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಮಲೇರಿಯಾ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
ಮಲೇರಿಯಾ ರೋಗಕ್ಕೆ ಕಾರಣಗಳು ಹಾಗೂ ಮಲೇರಿಯಾ ಬರದಂತೆ ಕೈಗೊಳ್ಳಬೇಕಾದ ಮುಂಜಾಗರೂಕತಾ ಕ್ರಮಗಳನ್ನು ಎಲ್ಲರೂ ತಿಳಿದುಕೊಳ್ಳುವುದು ಅವಶ್ಯ. ಮಲೇರಿಯಾ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿ ಇಲ್ಲಿದೆ.
ಮಲೇರಿಯಾ ಹರಡಲು ಕಾರಣಗಳು ಮತ್ತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು
* ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯ ದೇಹದಲ್ಲಿರುವ ಪರಾವಲಂಬಿ ವೈರಸ್ನಿಂದ ಮಲೇರಿಯಾ ಬರುತ್ತದೆ. ಅನಾಫಿಲೀಸ್ ಸೊಳ್ಳೆ ಕಚ್ಚಿದಾಗ ವೈರಸ್ ಮಾನವ ದೇಹ ಪ್ರವೇಶಿಸುತ್ತದೆ. ಮಲೇರಿಯಾ ಬಂದಾಗ ವಿಪರೀತ ಜ್ವರ, ತಲೆನೋವು ಹಾಗೂ ಚಳಿ ಸಮಸ್ಯೆಗಳು ಬಾಧಿಸುತ್ತವೆ. ಮಲೇರಿಯಾ ಒಮ್ಮೆ ಬಂದು ಹೋದ ಮೇಲೆ ದೇಹದಲ್ಲಿ ಒಂದು ಮಟ್ಟದ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿ ನಂತರದ ಸಮಯದಲ್ಲಿ ಮತ್ತೆ ಮಲೇರಿಯಾ ಬಂದರೂ ಅದು ಅಷ್ಟು ತೀವ್ರವಾಗಿರುವುದಿಲ್ಲ.
* ಮಳೆಗಾಲವು ಸೊಳ್ಳೆಗಳ ಸಂತಾನೋತ್ಪತ್ತಿಗೆ ಸೂಕ್ತವಾಗಿರುವುದರಿಂದ ಹಾಗೂ ಈ ಸಮಯದಲ್ಲಿ ಮನುಷ್ಯರ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಸಾಂಕ್ರಾಮಿಕ ರೋಗಗಳು ಬಹುಬೇಗನೆ ಮಾನವರಿಗೆ ಅಂಟಿಕೊಳ್ಳುತ್ತವೆ.
* ಮಳೆಗಾಲದಲ್ಲಿ ಸೊಳ್ಳೆಗಳು ಬೆಳೆಯದಂತೆ ಕ್ರಿಮಿನಾಶಕ ಸಿಂಪಡಣೆ ಮಾಡುವುದು ಅಗತ್ಯ. ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿದರೆ ತುಂಬಾ ಒಳ್ಳೆಯದು.
* ಪ್ರಸ್ತುತ ಮಲೇರಿಯಾ ರೋಗಕ್ಕೆ ಎಸಿಟಿ ಚಿಕಿತ್ಸೆ (ACT -artemisinin-based combination) ಪರಿಣಾಮಕಾರಿಯಾಗಿದೆ.
ಭಾರತದಲ್ಲಿ ಮಲೇರಿಯಾ ವ್ಯಾಪಕತೆ
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಮಲೇರಿಯಾ ಹರಡುವಿಕೆ ಗಣನೀಯವಾಗಿ ಕಡಿಮೆಯಾಗಿದ್ದು ಸಮಾಧಾನಕರ ವಿಷಯವಾಗಿದೆ. ಮಲೇರಿಯಾ ಪ್ರಕರಣಗಳು ಹಾಗೂ ಮಲೇರಿಯಾ ಸಂಬಂಧಿ ಸಾವುಗಳು 2016 ಕ್ಕೆ ಹೋಲಿಸಿದರೆ 2019 ರಲ್ಲಿ ಗಮನಾರ್ಹವಾಗಿ ಕಡಿಮೆಯಾಗಿವೆ.