ಅಮೃತಸರ್(ಪಂಜಾಬ್): ಮೊಬೈಲ್ ಅಥವಾ ಅಂತರ್ಜಾಲವನ್ನು ಅಗತ್ಯಕ್ಕಿಂತ ಹೆಚ್ಚು ಮುಳುಗಿದವರನ್ನು ಅದರಿಂದ ಹೊರತರಲು ಅಮೃತ್ಸರದ ಅಸ್ಪತ್ರೆಯೊಂದರಲ್ಲಿ ಮೊಬೈಲ್/ಇಂಟರ್ನೆಟ್ ಡಿ ಅಡಿಕ್ಷನ್ ಸೆಂಟರ್ ತಲೆಯೆತ್ತಿದೆ.
ಹೌದು, ಸದ್ಯದ ಪೀಳಿಗೆ ಮೊಬೈಲ್ ಗೀಳಿಗೆ ಸಿಲುಕಿದ್ದು, ದಿನೇ ದಿನೇ ಇದೊಂದು ಬೃಹತ್ ಸಮಸ್ಯೆಯಾಗಿ ಇಡೀ ವಿಶ್ವವನ್ನೇ ಕಾಡುತ್ತಿದೆ. ಅಷ್ಟೇ ಅಲ್ಲದೇ ಡ್ರಗ್, ಮದ್ಯ ವ್ಯಸನಿಗಳನ್ನು ಮುಕ್ತರನ್ನಾಗಿಸುವ ಸೆಂಟರ್ಗಳ ಸಾಲಿನಲ್ಲಿ ಮೊಬೈಲ್/ಇಂಟರ್ನೆಟ್ ಡಿ ಅಡಿಕ್ಷನ್ ಸೆಂಟರ್ಗಳು ಒಂದೊಂದಾಗೆ ತಲೆ ಎತ್ತುತ್ತಿವೆ.
ಪಂಜಾಬ್ನ ಅಮೃತ್ಸರದಲ್ಲಿ ಪ್ರಾರಂಭವಾಗಿರುವ ಮೊಬೈಲ್/ಇಂಟರ್ನೆಟ್ ಡಿ ಅಡಿಕ್ಷನ್ ಸೆಂಟರ್ ರಾಜ್ಯದ ಮೊದಲ ಡಿ ಅಡಿಕ್ಷನ್ ಸೆಂಟರ್ ಆಗಿದೆ. ಹಾಗೂ ಇಂತದ್ದೊಂದು ಉಪಾಯ ಹೊಳೆಸಿಕೊಂಡ ವೈದ್ಯ ಡಾ. ಜಗದೀಪ್ ಪಾಲ್, ಮಕ್ಕಳಲ್ಲಿ ಮೊಬೈಲ್, ಇಂಟರ್ನೆಟ್ ಬಳಕೆ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಮುಂದೊಂದು ದಿನ ಇದು ಅನಾಹುತಕ್ಕೆ ಕಾರಣವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಅನಾರೋಗ್ಯ ಹಿನ್ನಲೆ ಆಸ್ಪತ್ರೆಗೆ ಬರುವ ಪೋಷಕರು ತಮ್ಮ ಮಕ್ಕಳ ಮೊಬೈಲ್ ಗೀಳಿನ ನಿವಾರಣೆ ಬಗ್ಗೆ ಚರ್ಚೆ ಮಾಡುತ್ತಿದ್ದರಿಂದಲೇ ನನಗೆ ಇಂತದ್ದೊಂದು ಕೇಂದ್ರವನ್ನು ತೆರೆಯಬಹುದು ಅನ್ನೋ ಉಪಾಯ ಹೊಳೆಯಿತು. ಇಲ್ಲಿಗೆ ನಿತ್ಯ ಭೇಟಿ ನೀಡುವ ಮಕ್ಕಳಲ್ಲಿ ಸುದಾರಣೆ ಕಂಡುಬಂದಿದೆ ಅಂತಾರೆ ಡಾ. ಪಾಲ್.
ಹೆಚ್ಚಾಗಿ ಪೋಷಕರು ಹೆದರಿಸಿ ಬೆದರಿಸಿ ಮಕ್ಕಳನ್ನು ಸುಮ್ಮನಿರಿಸಲು ಅಥವಾ ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ತಮ್ಮ ಕೆಲಸದಲ್ಲಿ ತೊಡಗುವುದರಿಂದಲೇ ಮಕ್ಕಳಿಗೆ ಮೊಬೈಲ್ ಬಳಕೆ ಚಟವಾಗಿ ಹೋಗುತ್ತದೆ. ಇನ್ನು ಈ ಮಾನಸಿಕ ಖಾಯಿಲೆಯಿಂದ ಹೊರ ಬರಲು ಯಾವುದೇ ಔಷಧ ಅಥವಾ ಟಾನಿಕ್ ಇಲ್ಲ. ಬದಲಿಗೆ ಮೊಬೈಲ್ ಮಿತವಾದ ಬಳಕೆಯಿಂದ ಇದು ಸಾಧ್ಯ. ಈ ನಿಟ್ಟಿನಲ್ಲಿ ಪೋಷಕರ ಸಹಕಾರ ಮಕ್ಕಳಿಗೆ ಅತಿಮುಖ್ಯ ಎನ್ನುತ್ತಾರೆ ಡಾ. ಪಾಲ್.