ಮಲಪ್ಪುರಂ( ಕೇರಳ): ಕಾಡಿನಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳಿಗೆ ಕೇರಳ ರಾಜ್ಯ ಸರ್ಕಾರದಿಂದ ಮೊಬೈಲ್ ಪಡಿತರ ಅಂಗಡಿ ವ್ಯವಸ್ಥೆ ಮಾಡಲಾಗಿದೆ.
ಕೇರಳದ ಕಾಡುಗಳೊಳಗಿನ ದೂರದ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ಆಹಾರ ಸುರಕ್ಷತೆ ಖಾತ್ರಿಪಡಿಸುವ ಸಲುವಾಗಿ ಮೊಬೈಲ್ ಪಡಿತರ ಅಂಗಡಿ (ಸಾರ್ವಜನಿಕ ವಿತರಣಾ ವ್ಯವಸ್ಥೆ ಅಂಗಡಿ) ಯೋಜನೆಯನ್ನು ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಾರಿಗೆ ತಂದಿದೆ. ಮೊದಲ ಹಂತದಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ನೀಲಂಬೂರು ತಾಲೂಕಿನಲ್ಲಿರುವ ಅಂಬುಮಾಲಾ, ಉಚಕ್ಕುಲಂ, ನೆಡುಂಕಯಂ ಮತ್ತು ಮುಂಡಕ್ಕಡವು ಪ್ರದೇಶದಲ್ಲಿ ವಾಸಿಸುವ 206 ಬುಡಕಟ್ಟು ಕುಟುಂಬಗಳಿಗೆ ಅನುಕೂಲ ಮಾಡಿಕೊಡಲಾಗಿದೆ.
ಕಾಡುಗಳಲ್ಲಿನ ಈ ದೂರದ ಪ್ರದೇಶಗಳಲ್ಲಿ ವಾಸಿಸುವ ಜನರು ನೀಲಂಬೂರು ಪ್ರದೇಶದಲ್ಲಿ ಸುರಿಯುವ ಮಳೆಯಿಂದ ನಿರಂತರ ಪ್ರವಾಹ ಬಂದು ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಾರೆ. ಅವರು ಆಹಾರ ಸಾಮಗ್ರಿಗಳನ್ನು ಪಡೆಯಲು ಕಿನಟ್ಟಿಂಗಲ್, ವಾರಿಕ್ಕಲ್, ಕಲ್ಕುಲಂ ಮತ್ತು ಕಕ್ಕಡಂಪೊಯಿಲ್ನಲ್ಲಿರುವ ಪಿಡಿಎಸ್ ವಿತರಕರ ಅಂಗಡಿಗಳನ್ನು ತಲುಪಲು ಹಲವು ಕಿಲೋಮೀಟರ್ ನಡೆದು ಹೋಗಬೇಕು.
ಪ್ರವಾಹದಲ್ಲಿ ಮನೆಗಳು ಮತ್ತು ಭೂಮಿ ಕಳೆದುಕೊಂಡ ಕರುಲೈ ಗ್ರಾಮ ಪಂಚಾಯಿತಿಯ ಮುಂಡಕ್ಕಡವು ಬುಡಕಟ್ಟು ಕುಟುಂಬಗಳು ಪ್ರಸ್ತುತ ವಟ್ಟಿಕ್ಕಲ್ಲು, ಕಾಂಜಿರಕ್ಕಡವು ಮತ್ತು ಪುಲಿಮುಂಡ ಪ್ರದೇಶಗಳಲ್ಲಿ ವಾಸಿಸುತ್ತಿವೆ. ಈ ವರ್ಷದ ಪ್ರವಾಹದಲ್ಲಿ ಮುಂಡಕ್ಕಡವಿಗೆ ಪ್ರವೇಶಿಸುವ ರಸ್ತೆ ಕೊಚ್ಚಿ ಹೋಗಿದ್ದರಿಂದ, ಕಾಂಜಿರಕ್ಕಡವು ಮತ್ತು ಪುಲಿಮುಂಡ ಊರುಗಳಲ್ಲಿ ವಾಸಿಸುವ ಜನರು ಕರುಲೇಯಿ ವರಿಕಳ್ಳುವಿನಲ್ಲಿರುವ ಪಡಿತರ ಅಂಗಡಿ ತಲುಪಲು ಮುತೇಡಂ ಗ್ರಾಮ ಪಂಚಾಯಿತಿ ಮೂಲಕ ಅನೇಕ ಕಿಲೋಮೀಟರ್ ದೂರ ನಡೆಯಬೇಕು. ಇವರ ಸಂಕಷ್ಟವನ್ನು ಅರಿತ ಸರ್ಕಾರ ಮೊಬೈಲ್ ಪಡಿತರ ಅಂಗಡಿ ವ್ಯವಸ್ಥೆ ಮಾಡಿದೆ.
ಪ್ರತಿ ತಿಂಗಳು 10ರೊಳಗೆ ದೂರದ ಪ್ರದೇಶಗಳಲ್ಲಿನ ಪ್ರತಿಯೊಂದು ಬುಡಕಟ್ಟು ಪ್ರದೇಶಗಳಿಗೆ ಆಹಾರ ಧಾನ್ಯಗಳನ್ನು ತಲುಪಿಸುವ ಮೊಬೈಲ್ ರೇಷನ್ ಅಂಗಡಿ ಇಲ್ಲಿನ ಜನರಿಗೆ ದೊಡ್ಡ ಪರಿಹಾರವಾಗಿದೆ.