ರಾಯ್ಪುರ(ಛತ್ತೀಸ್ಘಡ): ಒಂದನೇ ತರಗತಿಯಲ್ಲಿ ಓದುತ್ತಿದ್ದ ಪುಟ್ಟ ಬಾಲಕಿ ಮೇಲೆ ಅದೇ ಶಾಲೆಯ ಕೇವಲ 10 ವರ್ಷ ವಯಸ್ಸಿನ ಮೂವರು ಬಾಲಕರು ಅತ್ಯಾಚಾರವೆಸಗಿರುವ ಪ್ರಕರಣ ಛತ್ತೀಸ್ಗಢ್ ರಾಜಧಾನಿ ರಾಯ್ಪುರದ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ.
ಪ್ರಕರಣ ಇದೇ ಅಗಸ್ಟ್ 20ಕ್ಕೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೂವರು ಬಾಲಕರು 6 ವರ್ಷದ ಬಾಲಕಿಯನ್ನು ಶಾಲೆಯ ಬಾತ್ರೂಂಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಇಬ್ಬರು ಬಾಲಕರು ಬಾಲಕಿ ಮೇಲೆ ದೌರ್ಜನ್ಯವೆಸಗಿದ್ದು, ಇದೇ ವೇಳೆ ಓರ್ವ ಬಾಲಕ ಬಾತ್ರೂಂ ಹೊರಗಡೆ ಯಾರಾದರೂ ಬಂದರೆ ತಿಳಿಸುವುದಾಗಿ ಭದ್ರತೆ ಒದಗಿಸಿದ್ದಾನೆ ಎಂದು ಖಮ್ತಾರೈ ಠಾಣೆಯ ಪೊಲೀಸ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಪ್ರಕರಣದ ಬಳಿಕ ಬಾಲಕಿಯ ಹೆತ್ತವರು, ಆರೋಪಿ ಬಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಲೆಯ ಮುಖ್ಯೋಪಾಧ್ಯಾಯರ ಬಳಿ ದೂರು ನೀಡಿದ್ದರು. ಆದರೆ, ಶಾಲೆಯಿಂದ ಯಾವುದೇ ಪ್ರತಿಕ್ರಿಯೆ ದೊರಕದ ಬಳಿಕ ಖಮ್ತಾರೈ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಖಚಿತಗೊಂಡಿದೆ ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.
ಮೂವರು ಬಾಲಕರ ಮೇಲೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು 354 ಎ (ಲೈಂಗಿಕ ಕಿರುಕುಳ) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಆರೋಪವಿದೆ. ಆದರೆ, ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ.