ನವದೆಹಲಿ: 'ಡಿಫೆನ್ಸ್ ಅಕ್ವಿಸಿಷನ್ ಪ್ರೊಸೀಜರ್ (ಡಿಎಪಿ) 2020' ಎಂಬ ಶೀರ್ಷಿಕೆಯ ರಕ್ಷಣಾ ಖರೀದಿ ಪ್ರಕ್ರಿಯೆ (ಡಿಪಿಪಿ) ಯ ಎರಡನೇ ಕರಡನ್ನು ರಕ್ಷಣಾ ಸಚಿವಾಲಯ ಅಪ್ಲೋಡ್ ಮಾಡಿದೆ. ಇದಕ್ಕಾಗಿ ವಿವಿಧ ಮಧ್ಯಸ್ಥಗಾರರು ಹಾಗೂ ಸಾರ್ವಜನಿಕರಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಸಚಿವಾಲಯ ಆಹ್ವಾನಿಸಿದೆ.
"ಡಿಪಿಪಿ 2020ರ ಮೊದಲ ಕರಡನ್ನು ವೆಬ್-ಹೋಸ್ಟ್ ಮಾಡಲಾಗಿತ್ತು. ಈ ಬಗ್ಗೆ 2020ರ ಏಪ್ರಿಲ್ 17 ರೊಳಗೆ ವಿವಿಧ ಮಧ್ಯಸ್ಥಗಾರರಿಂದ ಅಭಿಪ್ರಾಯ, ಶಿಫಾರಸುಗಳು ಹಾಗೂ ಸಲಹೆಗಳನ್ನು ಕೋರಲಾಗಿತ್ತು. ಬಳಿಕ ಆ ಅವಧಿಯನ್ನು ಮೇ 8ಕ್ಕೆ ವಿಸ್ತರಿಸಲಾಯಿತು. ಅಂದಿನಿಂದ ವಿವಿಧ ಮಧ್ಯಸ್ಥಗಾರರು, ಸೇವೆಗಳು ಹಾಗೂ ವಿವಿಧ ಉದ್ಯಮಗಳಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಇದು 10,000ಕ್ಕೂ ಹೆಚ್ಚು ಪುಟಗಳನ್ನು ದಾಟಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ವಿವಿಧ ಏಜೆನ್ಸಿಗಳಿಂದ ಪಡೆದ ಅಭಿಪ್ರಾಯಗಳ ವಿಶ್ಲೇಷಣೆಯ ನಂತರ ಅವರ ನಿಖರ ಕಾಳಜಿಯನ್ನು ಅರ್ಥಮಾಡಿಕೊಳ್ಳಲು, ಅವರೊಂದಿಗೆ ವೈಯಕ್ತಿಕವಾಗಿ ಮತ್ತು ಆನ್ಲೈನ್ ಮೂಲಕ ಸಂವಾದಗಳನ್ನು ಸಹ ನಡೆಸಲಾಯಿತು.
ತಿದ್ದುಪಡಿ ಮಾಡಿದ ಎರಡನೆಯ ಕರಡನ್ನು 'ಆತ್ಮನಿರ್ಭರ ಭಾರತ ಅಭಿಯಾನ'ದ ಅಂಗವಾಗಿ ಘೋಷಿಸಲಾದ ರಕ್ಷಣಾ ಸುಧಾರಣೆಗಳ ಸಿದ್ಧಾಂತಗಳಿಂದ ನಡೆಸಲ್ಪಡುವ ಪರಿಶೀಲನಾ ಸಮಿತಿಯು ಅಂತಿಮಗೊಳಿಸಿದೆ. ಸದ್ಯ ಅದನ್ನು ಸಾರ್ವಜನಿಕ ವಲಯದಲ್ಲಿ ಇರಿಸಲಾಗಿದೆ.
ಆಗಸ್ಟ್ 10, 2020ರವರೆಗೆ ತಿದ್ದುಪಡಿ ಮಾಡಿದ ಕರಡು ಕುರಿತು ಮತ್ತೊಮ್ಮೆ ನಿರ್ದಿಷ್ಟ ಅಭಿಪ್ರಾಯ ಹಾಗೂ ಪ್ರತಿಕ್ರಿಯೆಗಳನ್ನು ಕೋರಲಾಗಿದೆ.