ನವದೆಹಲಿ: ಮಹಾಮಾರಿ ಕೊರೊನಾ ಸೋಂಕು ತಗುಲಿ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್ ಅಂಗಡಿ (65) ಇಂದು ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ನಿಧನರಾಗಿದ್ದಾರೆ.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಗೆ ಕರೊನಾ ಸೋಂಕು ದೃಢ
ಸೆಪ್ಟೆಂಬರ್ 11ರಂದು ಮಹಾಮಾರಿ ಕೊರೊನಾ ಸೋಂಕು ತಗುಲಿರುವ ಬಗ್ಗೆ ಅವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಸುರೇಶ್ ಅಂಗಡಿ ಪ್ರತಿನಿಧಿಸುತ್ತಿದ್ದರು. 2004,2009, 2014, 2019 ರಲ್ಲಿ ಸಂಸದರಾಗಿ ಸುರೇಶ್ ಅಂಗಡಿ ಆಯ್ಕೆಯಾಗಿದ್ದರು.
1951 ಜೂನ್ 1ರಂದು ಬೆಳಗಾವಿಯಲ್ಲಿ ಜನಿಸಿದ್ದರು. ಬಿಕಾಂ, ಎಲ್ಎಲ್ಬಿ ವ್ಯಾಸಂಗ ಮಾಡಿರುವ ಸುರೇಶ್ ಅಂಗಡಿ, 2004ರಿಂದಲೂ ಸತತವಾಗಿ ನಾಲ್ಕು ಸಲ ಸಂಸದರಾಗಿ ಆಯ್ಕೆಯಾಗಿದ್ದರು.
ಪತ್ನಿ ಮಂಗಳಾ, ಪುತ್ರಿಯರಾದ ಸ್ಪೂರ್ತಿ ಹಾಗೂ ಶ್ರದ್ಧಾ ಅವರನ್ನು ಸುರೇಶ್ ಅಂಗಡಿ ಅವರು ಅಗಲಿದ್ದಾರೆ. ಈಗಾಗಲೇ ಶ್ರದ್ಧಾ ಅವರ ವಿವಾಹವನ್ನ ಜಗದೀಶ್ ಶೆಟ್ಟರ್ ಅವರ ಪುತ್ರನೊಂದಿಗೆ ಮಾಡಲಾಗಿದೆ.
ಕುಟುಂಬಸ್ಥರಿಂದ ದೃಢ: ಕುಟುಂಬ ಸದಸ್ಯರು ಸುರೇಶ ಅಂಗಡಿ ಅವರು ಮೃತಪಟ್ಟಿರುವ ಮಾಹಿತಿಯನ್ನು ಈಟಿವಿ ಭಾರತಕ್ಕೆ ದೃಢಪಡಿಸಿದ್ದಾರೆ.
ಸಂಬಂಧಿಕರ ದೌಡು!
ಬೆಳಗಾವಿಯ ವಿಶ್ವೇಶ್ವರ ನಗರದ ಸಂಪಿಗೆ ನಗರದ ಸುರೇಶ ಅಂಗಡಿ ಅವರ ನಿವಾಸಕ್ಕೆ ಸಂಬಂಧಿಕರು ಹಾಗೂ ಸ್ನೇಹಿತರು ದೌಡಾಯಿಸುತ್ತಿದ್ದಾರೆ. ಮನೆಯಲ್ಲಿ ಸುರೇಶ ಅಂಗಡಿ ಅವರ ಹಿರಿಯ ಸುಪುತ್ರಿ ಸ್ಫೂರ್ತಿ ಪಾಟೀಲ ಹಾಗೂ ಅಳಿಯ ಇದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.