ಶ್ರೀನಗರ (ಜಮ್ಮು ಕಾಶ್ಮೀರ): ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ದಿನಗಳಿರುವಂತೆ ಭಯೋತ್ಪಾದಕರ ಎರಡು ಅಡಗುದಾಣಗಳನ್ನು ಭದ್ರತಾ ಪಡೆಗಳು ಜಮ್ಮು ಕಾಶ್ಮೀರ ಪುಲ್ವಾಮಾ ಜಿಲ್ಲೆಯಲ್ಲಿ ನಾಶಪಡಿಸಿ, ಅಪಾರ ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ.
ಭಾರತೀಯ ಸೇನೆ ಹಾಗೂ ಜಮ್ಮುಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಲಷ್ಕರ್ ಎ ತೋಯ್ಬಾದ ಎರಡು ಅಡಗುದಾಣಗಳನ್ನು ನಾಶಪಡಿಸಲಾಗಿದೆ. ಆವಂತಿಪೋರಾದ ಬಳಿಯಿರುವ ಬದ್ರೂ ಕಾಡುಗಳಲ್ಲಿ ಉಗ್ರರಿರುವ ಬಗ್ಗೆ ಸುಳಿವು ಸಿಕ್ಕಿದ್ದು, ಬುಧವಾರ ರಾತ್ರಿ ಶೋಧ ಕಾರ್ಯಾಚರಣೆ ಆರಂಭವಾಗಿತ್ತು ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವೇಳೆ, 1900ಕ್ಕೂ ಹೆಚ್ಚು ಮದ್ದು ಗುಂಡುಗಳು ಹಾಗೂ ಕೆಲವು ಗ್ರೆನೇಡ್ಗಳನ್ನು ವಶಪಡಿಸಿಕೊಂಡ ನಂತರ ಇಂದು ಬೆಳಗ್ಗೆ ಅಡಗುದಾಣಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ಸೇನಾಮೂಲಗಳು ಸ್ಪಷ್ಟನೆ ನೀಡಿವೆ.
ಆಗಸ್ಟ್ 8ರಂದು ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪೂಂಚ್ ಜಿಲ್ಲೆಯ ಮಂಗ್ನಾರ್ ಬಳಿ ಅಡಗುದಾಣಗಳನ್ನು ಪತ್ತೆ ಮಾಡಿ, ಅವುಗಳನ್ನು ನಾಶಪಡಿಸಲಾಗಿತ್ತು.